ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾವನ್ನು ನೋಡಲು ಆಗಮಿಸುವ ಪ್ರವಾಸಿಗರ ಕಣ್ಣಿಗೆ ಈ ಬಾರಿ ಹಬ್ಬವೋ ಹಬ್ಬ. ಅದರಲ್ಲೂ ಪುಷ್ಪಪ್ರಿಯರಿಗೆ ಸಂತಸದ ಸುದ್ದಿ. ಯಾಕೆಂದರೆ ಕೇವಲ ಕುಪ್ಪಣ್ಣ ಪಾರ್ಕ್ ಗಷ್ಟೇ ಸೀಮಿತವಾಗಿದ್ದ ಪುಷ್ಪ ಪ್ರದರ್ಶನ ಈ ಬಾರಿ ರಾಮಕೃಷ್ಣನಗರದಲ್ಲಿರುವ ಲಿಂಗಾಂಬುದಿ ಬೊಟಾನಿಕಲ್ ಅಂದರೆ ಸಸ್ಯಶಾಸ್ತ್ರೀಯ ತೋಟದಲ್ಲಿ ದೊಡ್ಡ ಮಟ್ಟದಲ್ಲಿಯೇ ಪುಷ್ಪಮೇಳವನ್ನು ಆಯೋಜನೆಗೊಂಡಿದೆ.
ಈ ಬಾರಿಯ ದಸರಾ ಮಹೋತ್ಸವದಲ್ಲಿ ಲಿಂಗಾಬುದಿ ಕೆರೆಯ ಬೊಟಾನಿಕಲ್ ಗಾರ್ಡನ್ ನಲ್ಲಿಯೂ ಸೆ.22ರಿಂದ ಅ.2ರವರೆಗೆ ಪುಷ್ಪಮೇಳವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದ್ದು ನಲವತ್ತೈದಕ್ಕೂ ಹೆಚ್ಚು ವಿಧದ ಹೂವಿನ ಗಿಡಗಳನ್ನು ನಲವತ್ತು ಸಾವಿರ ಕುಂಡಗಳಲ್ಲಿ ಬೆಳೆಸಲಾಗುತ್ತಿದೆ
ಉದ್ಯಾನವನದ ಪ್ರವೇಶದ್ವಾರದಲ್ಲಿಯೇ ಎರಡೂ ಕೈಗಳನ್ನೆತ್ತಿ ಸಸ್ಯ ರಕ್ಷಿಸುವ ಆಕೃತಿಯನ್ನು ರಚಿಸಲಾಗಿದ್ದು ವಿಶೇಷವಾಗಿ ಗಮನ ಸೆಳೆಯುತ್ತಿದೆ. 5.60 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಬೊಟಾನಿಕಲ್ ಗಾರ್ಡನ್ 15 ಎಕರೆ ವಿಸ್ತೀರ್ಣದಲ್ಲಿದ್ದು ಸಸ್ಯಶಾಸ್ತ್ರ ಅಧ್ಯಯನಕ್ಕೆ ಪೂರಕವಾಗಿರುವ 290ಕ್ಕೂ ಹೆಚ್ಚು ಪ್ರಭೇದದ ಸಸ್ಯಗಳು ಅಲ್ಲಿ ಇವೆ. ಈ ಉದ್ಯಾನವನ ತೋಟಗಾರಿಕಾ ಇಲಾಖೆ ನಿರ್ಮಿಸಿರುವ ರಾಜ್ಯದ ನಾಲ್ಕನೇ ಹಾಗೂ ಮೈಸೂರು ಜಿಲ್ಲೆಯ ಮೊಟ್ಟ ಮೊದಲ ಸಸ್ಯಶಾಸ್ತ್ರೀಯ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿ ನಡೆಯಲಿರುವ ಪುಷ್ಪಮೇಳದಲ್ಲಿ ಥನ್ ಬರ್ಜಿಯಾ, ಎರಿಥ್ರಿನಾ ವೆರಿಗೆಟ, ಗುಲಾಬಿ, ಪ್ಲುಮೆರಿಯಾ, ಬಹುನಿಯಾ ಸೇರಿದಂತೆ ವಿವಿಧ ಬಗೆಯ ಹೂಗಿಡಗಳನ್ನು ಬೆಳೆಸಲಾಗಿದ್ದು ದಸರಾ ಆರಂಭಕ್ಕೂ ಮುನ್ನ ಅವುಗಳೆಲ್ಲ ವಿವಿಧ ವಿನ್ಯಾಸದ ರೂಪದಲ್ಲಿ ಸಿದ್ಧಗೊಳ್ಳಲಿದೆ. ಈಗಾಗಲೇ ಗಿಡ ಬಳ್ಳಿಗಳನ್ನು ವಿವಿಧ ಪ್ರಾಣಿ, ಪಕ್ಷಿಗಳ ಆಕೃತಿಯಲ್ಲಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೇ ಸಂಗೀತ, ನೃತ್ಯ ಕಾರಂಜಿಯನ್ನೂ ನಿರ್ಮಿಸಲಾಗಿದ್ದು ಸುತ್ತಲೂ 150ಮಂದಿ ಕುಳಿತು ನೃತ್ಯ ಕಾರಂಜಿ ವೀಕ್ಷಿಸಬಹುದಾಗಿದೆ. ಕೆರೆಯಲ್ಲಿನ ಪಕ್ಷಿ ವೀಕ್ಷಣೆಗೆ ವೀಕ್ಷಣಾ ಗೋಪುರ ನಿರ್ಮಿಸಲಾಗುತ್ತಿದ್ದು ರೇಲಿಂಗ್ಸ್ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಸೆ.22ರಿಂದ ಅ.2ರವರೆಗೆ ಪ್ರತಿದಿನ ಬೆಳಿಗ್ಗೆ 9ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಪುಷ್ಪಮೇಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಯಸ್ಕರಿಗೆ 60ರೂ., ಮಕ್ಕಳಿಗೆ 30 ರೂ.ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಪ್ರವಾಸಿಗರಿಗೆ ದಸರಾದಲ್ಲಷ್ಟೇ ಅಲ್ಲದೇ ಬೊಟಾನಿಕಲ್ ಗಾರ್ಡನ್ ವರ್ಷವಿಡೀ ವೀಕ್ಷಣೆಗೆ ಲಭ್ಯವಿದೆ.

ಒಟ್ಟಿನಲ್ಲಿ ಈ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಕಣ್ಮನಗಳನ್ನು ತಣಿಸಿಕೊಳ್ಳಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ,ಸಂಬಂಧಪಟ್ಟ ಇಲಾಖೆಗಳು ಭರ್ಜರಿ ತಯಾರಿ ನಡೆಸಿರುವುದಂತೂ ಸುಳ್ಳಲ್ಲ.