ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದ್ದು, ಈ ದುರ್ಘಟನೆ ಜಿಲ್ಲೆಯಲ್ಲಿನ ಮಾನವ–ಕಾಡಾನೆ ಸಂಘರ್ಷ ಮತ್ತೊಮ್ಮೆ ತೀವ್ರವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಮುಂಜಾನೆ ಕಾಫಿ ತೋಟದಲ್ಲಿ ಸುಣ್ಣ ಹಚ್ಚುವ ಕೆಲಸಕ್ಕೆ ಪುತ್ರಿಯರಾದ ಶೋಭ ಮತ್ತು ರಾಗಿಣಿ ಜತೆ ರಾಜಮ್ಮ ತೆರಳಿದ್ದರು. ಕೆಲಸದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮೂವರು ಓಡಿದರೂ, ಶೋಭಾ ಅವರನ್ನು ಬೆನ್ನಟ್ಟಿದ ಸಲಗ ತುಳಿದು ಸ್ಥಳದಲ್ಲೇ ಸಾಯಿಸಿದೆ. ಘಟನೆಯ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ.
ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ಮೃತದೇಹವನ್ನು ಸ್ಥಳದಲ್ಲೇ ಇಟ್ಟು ಶವ ಮೇಲೆತ್ತಲು ಬಿಡದೆ ಧರಣಿ ನಡೆಸಿದರು. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದರು. ಕಾಡಾನೆಗಳ ಸಂಚಾರದ ಬಗ್ಗೆ ಮುಂಚಿತ ಮಾಹಿತಿ ನೀಡುತ್ತಿಲ್ಲ. ಪುಂಡಾನೆಗಳನ್ನು ಸೆರೆಹಿಡಿಯುತ್ತಿಲ್ಲ ಹಾಗೂ ರೆಡಿಯೋ ಕಾಲರ್ ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್ಕೆ ಕುಮಾರಸ್ವಾಮಿ, ಹಾಗೂ ಡಿಎಫ್‌ಒ ಸೌರಭ್ ಕುಮಾರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದರೆ, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರಿಹಾರದ ಹಣ ನಮಗೆ ಬೇಡ, ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಶವ ಮೇಲೆತ್ತಲು ನಿರಾಕರಿಸಿ ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ಜಿಲ್ಲಾಧಿಕಾರಿ ಲತಾ ಕುಮಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಮೃತ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು. ಡಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಜನರನ್ನು ಮನವೊಲಿಸಲು ಪ್ರಯತ್ನಿಸಿದರು.
ಕಳೆದ ಕೆಲವು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗಳು ಹೆಚ್ಚುತ್ತಿದ್ದು, ಅಮಾಯಕರು ಬಲಿಯಾಗುತ್ತಿರುವುದು ಜನರಲ್ಲಿ ಭಯ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬ ಒತ್ತಾಯ ಮತ್ತಷ್ಟು ಗಟ್ಟಿಯಾಗುತ್ತಿದೆ.



