ಬೆಂಗಳೂರು : ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಕಾರ್ಯಾಚರಣೆ ಕುರಿತಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿಕಾರಿದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಎಂಟ್ರಿ ಕೊಟ್ಟಿದ್ದು, ಸಿಎಂ-ಡಿಸಿಎಂ ಜೊತೆ ಚರ್ಚೆ ನಡೆಸಿರೋದಾಗಿ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದರಲ್ಲದೆ ಪುನರ್ ವಸತಿಗೆ ಸೂಚಿಸಿದ್ದಾರೆ. ಇತ್ತ ಮಾನವ ಹಕ್ಕುಗಳ ಆಯೋಗ ಕೂಡ ಎಂಟ್ರಿ ಕೊಟ್ಟಿದೆ ಎನ್ನಲಾಗುತ್ತಿದೆ.
ಇನ್ನೂ ಯಲಹಂಕ ಕೋಗಿಲು ಲೇಔಟ್ ಒತ್ತುವರಿ ತೆರವು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ನಿರಾಶ್ರಿತರಿಗೆ ಸೂರು ನೀಡುವ ವಿಚಾರ ಇಂದೇ ನಿರ್ಧಾರವಾಗಲಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಹಾಗೂ ಸಿಎಂ ಸೂಚನೆ ಮೇರೆಗೆ ನಿನ್ನೆ ಕೋಗಿಲು ಬಡಾವಣೆಗೆ ಸಚಿವ ಜಮೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವಿಚಾರವಾಗಿ ಮಾನವೀಯತೆ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುವುದು ಖಚಿತವಾಗಿದೆ. ಸದ್ಯ ಮನೆ ಕಳೆದು ಕೊಂಡವರಿಗೆ ಎಲ್ಲಿ ಜಾಗ ಒದಗಿಸಬೇಕು ಎಂಬುವುದರ ಚರ್ಚೆ ನಡೆಯುತ್ತಿದೆ. ಡೆಮಾಲಿಷನ್ ಆಗಿರುವ ಜಾಗದಲ್ಲಿ ಮರು ಶೆಡ್ ನಿರ್ಮಾಣ ಮಾಡ್ತಾರಾ? ಹತ್ತಿರದಲ್ಲಿರುವ ಸರ್ಕಾರಿ ಜಮೀನಿನಲ್ಲಿ ವಾಸ್ತವ್ಯ ಹೂಡಿಸಲು ಅವಕಾಶ ಕೊಡ್ತಾರಾ? ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಯಡಿ ನಿರ್ಮಿಸಿದ ಮನೆ ಕೊಡ್ತಾರಾ? ಎಲ್ಲಿ ವ್ಯವಸ್ಥೆ ಮಾಡಬಹುದು ಎನ್ನುವ ಬಗ್ಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ ಮಾಡಲಿದ್ದಾರೆ ಎನ್ನಲಾಗಿದೆ.
ಅಲ್ಲದೆ ಸಿಹಿ ಸುದ್ದಿ ಕೊಡ್ತಾರೆ ಅಂತ ವಸತಿ ಸಚಿವ ಜಮೀರ್ ಸುಳಿವು ನೀಡಿದ್ದಾರೆ. ಮನೆಗಳ ಕಡೆವಿದ 10 ದಿನಗಳಾದ್ರೂ ಅಲ್ಲಿನ ನಿವಾಸಿಗಳು ಜಾಗ ಬಿಟ್ಟು ಕದಲಿಲ್ಲ. ಕೆಡವಿದ ಮನೆ ಬಳಿಯೇ ಟಾರ್ಪಲ್ ಹಾಕಿ ಜೀವನ ಮಾಡ್ತಿದ್ದಾರೆ. ನಡುಗುವ ಚಳಿಯಲ್ಲೇ ಮಹಿಳೆಯರು-ಮಕ್ಕಳು ಪರದಾಡುವಂತಾಗಿದೆ.
ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳ ಆಕ್ರೋಶ :
ಸೂರು ಕಲ್ಪಿಸಿ ಕೊಟ್ಟರೂ ಸರ್ಕಾರ ಸಾಲು ಸಾಲು ಟೀಕೆ ಎದುರಿಸುವ ಸಾಧ್ಯತೆಯಿದ್ದು, ಈಗಾಗಲೇ ಸರ್ಕಾರದ ನಡೆ ವಿರುದ್ಧ ಅಪಸ್ವರ ಕೇಳಿ ಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ಮತ್ತು ವಿಪಕ್ಷಗಳ ವಾಗ್ಬಣಕ್ಕೆ ಗುರಿಯಾಗಬೇಕಾದ ಪರಿಸ್ಥಿತಿ ಎದುರಾಗಿದೆ ಈಗಾಗಲೇ ಆಡಳಿತರೂಢ ಪಕ್ಷದ ವಿರುದ್ಧ ಬಿಜೆಪಿ ನಾಯಕರು ಕಿಡಿ ಕಾರುತ್ತಿದ್ದಾರೆ.
ಸಾರ್ವಜನಿಕ ವಲಯದಲ್ಲೂ ಸರ್ಕಾರದ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೋಗಿಲು ಲೇಔಟ್ ಮನೆಗಳ ತೆರವು ವಿಚಾರಕ್ಕೆ ಇದೀಗ ಮಾನವ ಹಕ್ಕು ಆಯೋಗ ಎಂಟ್ರಿ ಕೊಟ್ಟಿದೆ. ಇಂದು ಸ್ಥಳಕ್ಕೆ ಮಾನವ ಹಕ್ಕುಗಳ ಆಯೋಗದ ಭೇಟಿ ನೀಡಲಿದೆ. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಭೇಟಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ನಡೆಸಲಿದ್ದಾರೆ.
ಮಾನವ ಹಕ್ಕುಗಳ ಆಯೋಗದಿಂದ ಈಗಾಗಲೇ ತನಿಖೆಗೆ ಆದೇಶ ಹೊರಡಿಸಲಾಗಿದೆ. ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ನೀಡಿದ್ದರು. ಈ ದೂರನ್ನ ಉಲ್ಲೇಖಿಸಿ ತನಿಖೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.



