Monday, May 26, 2025
Google search engine

Homeರಾಜ್ಯಸುದ್ದಿಜಾಲ2 ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

2 ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಪುರಾಣಿ ಪೋಡಿಗೆ ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಈ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ಇಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ೨ ನೇ ದಿನಕ್ಕೆ ಕಾಲಿಟ್ಟಿದ್ದು ಇಲ್ಲಿ ಭಾಗವಹಿಸಿದ್ದ ವೀರೇಗೌಡ್ರ ಜಡೇಗೌಡ(೫೦) ಹಾಗೂ ರುದ್ರಮ್ಮ ಎಂಬುವರು ಅಸ್ವಸ್ಥಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಇದರಲ್ಲಿ ಇದಕ್ಕಿದ್ದಂತೆ ರಕ್ತವಾಂತಿ ಮಾಡಿಕೊಂಡು ಅಸ್ವಸ್ಥರಾದ ವೀರೇಗೌಡ್ರ ಜಡೇಗೌಡ ಎಂಬುವವರಿಗೆ ಬೆಟ್ಟದಲ್ಲಿರುವ ವಿಜಿಕೆಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೆ ಮತ್ತೊಬ್ಬರಾದ ರುದ್ರಮ್ಮ ಎಂಬುವವರೂ ತಲೆಸುತ್ತಿ ಬಿದ್ದಿದ್ದು ಇವರಿಗೆ ಇಲ್ಲೇ ಚಿಕಿತ್ಸೆ ನೀಡಿ ಮನೆಯಲ್ಲೇ ಇರಿಸಲಾಗಿದೆ ಎಂದು ದಾಸೇಗೌಡ, ನಾಗರಾಜು ಮಾಹಿತಿ ನೀಡಿದರು. ಪುರಾಣಿ ಪೋಡಿನ ಜನರು ಇಲ್ಲಿಗೆ ರಸ್ತೆ, ವಿದ್ಯುತ್ ಒದಗಿಸುವಂತೆ ಹತ್ತಾರು ದಶಕಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಇಲ್ಲಿಗೆ ಇನ್ನೂ ಈ ಸೌಲಭ್ಯ ನೀಡಿಲ್ಲ. ಇಲ್ಲಿರುವ ನಾವು ಮನುಷ್ಯರೇ ಸಂವಿಧಾನದ ಅಡಿಯಲ್ಲಿ ನಾವು ಬರುತ್ತೇವೆ. ಆದರೆ ನಮ್ಮನ್ನು ಮೃಗಗಳೆಂದು ಜನಪ್ರತಿನಿಧಿಗಳು, ಇಲಾಖೆಯವರು ಭಾವಿಸಿದಂತಿದೆ. ರಾತ್ರಿಯಾದರೆ ಪಂಜಿನ ಬೆಳಕಿನಲ್ಲೇ ಕಾಲ ದೂಡುವ ಪರಿಸ್ಥಿತಿ ಇದೆ. ನಮ್ಮ ಪೋಡಿನಲ್ಲಿ ಒಟ್ಟು ೧೩೯ ಕುಟುಂಬಗಳಿವೆ, ೬೪೫ ಜನರಿದ್ದಾರೆ. ಇಲ್ಲಿ ೩೧೯ ಮತದಾರರು ಇದ್ದಾರೆ.

ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲೂ ಈ ಪೋಡಿನ ಜನರು ಇಲ್ಲಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಮತದಾನ ಬಹಿಷ್ಕರಿಸಿದ್ದರು. ಆದರೆ ಸ್ಥಳಕ್ಕೆ ಕೆಲ ಇಲಾಖೆಯ ಅಧಿಕಾರಿಗಳು ಬಂದು ಮನವೊಲಿಸಿದ್ದರು. ಈಗ ಮತ್ತೆ ಲೋಕಸಭೆ ಚುನಾವಣೆ ಬಂದಿದೆ. ಆದರೆ ಒಂದೂ ಸಮಸ್ಯೆಯೂ ಬಗೆಹರಿದಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ನಮಗೆ ರಸ್ತೆ ಹಾಗೂ ವಿದ್ಯುತ್ ನೀಡಬೇಕು ಅಲ್ಲಿಯವರೆಗೂ ನಾವು ನಮ್ಮ ಸತ್ಯಾಗ್ರಹವನ್ನು ವಾಪಸ್ಸು ಪಡೆಯೊಲ್ಲ. ಮತದಾನ ಮಾಡುವುದಿಲ್ಲ. ಅಲ್ಲದೆ ಇಲ್ಲೇ ತೆರೆಯುವ ಮತಗಟ್ಟೆಯನ್ನು ತೆರೆಯಲೂ ಅವಕಾಶ ನೀಡುವುದಿಲ್ಲ ಎಂದು ಗ್ರಾಮದ ತಮ್ಮಡಿ ಮುತ್ತೇಗೌಡ, ಸಿದ್ದೇಗೌಡ ಮಾಹಿತಿ ನೀಡಿದರು.

ಮಂಜುಳಾ, ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಭೇಟಿ: ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟದ ಹಲವು ಪೋಡುಗಳಲ್ಲಿ ವಾಸಿಸುವ ಗಿರಿಜನರ ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೇ ಯೋಜನೆಗಳನ್ನು ರೂಪಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಸಂಬಂಧ ರಾಜ್ಯಮಟ್ಟದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಇಲ್ಲಿಗೆ ವಿದ್ಯುತ್ ನೀಡಲು ಕ್ರಮ ವಹಿಸಿದ್ದಾರೆ. ಈ ಸಂಬಂಧ ಗುರುವಾರ ತಹಶೀಲ್ದಾರ್ ಹಾಗೂ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿದ್ದು ಮನವೊಲಿಕೆ ಪ್ರಯತ್ನ ಮಾಡಿದ್ದಾರೆ. ಆದರೆ ಇವರು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಡಿಸಿಎಫ್ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಬೇಕೆಂಬ ಮನವಿ ಇಟ್ಟಿದ್ದಾರೆ. ಈಗ ಚುನಾವಣೆ ಕರ್ತವ್ಯದಲ್ಲಿ ಜಿಲ್ಲಾಧಿಕಾರಿಗಳು ನಿರತರಾಗಿರುವ ಕಾರಣ ನಾನು ಸ್ಥಳಕ್ಕೆ ಭೇಟಿ ನೀಡಿದ್ದು ಮನವೊಲಿಕೆಗೆ ಪ್ರಯತ್ನಿಸಿದ್ದೇನೆ ಆದರೆ ಇವರು ಇದಕ್ಕೆ ಒಪ್ಪುತ್ತಿಲ್ಲ ಎಂದು ಮಾಹಿತಿ ನೀಡಿದರು.

ಗ್ರಾಪಂ ಸದಸ್ಯ ಸಿ.ಡಿ. ಮಹದೇವ ಮಾಜಿ ಸದಸ್ಯ ಬಸವೇಗೌಡ ಗ್ರಾಮದ ದಾಸ, ನಾಗರಾಜು ಬೊಮ್ಮಿಸಿದ್ದೇಗೌಡ, ಬೊಮ್ಮಮ್ಮ,ಮುತ್ತಮ್ಮ, ಮಾದಮ್ಮ, ರಂಗಸ್ವಾಮಿ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular