ಮೈಸೂರು: ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿರುವುದರಿಂದ ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಮೈಸೂರು ಜಯದೇವ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಗೂ ವಿಧಾನಸಭಾ ಚುನಾವಣೆಗೂ ವ್ಯತ್ಯಾಸವಿದ್ದು ದೇಶದ ಹಿತಕಾಯುವ ದೃಷ್ಟಿಯಿಂದ ಜನ ಬೇರೆ ಬೇರೆ ಯೋಚನೆ ಮಾಡುತ್ತಾರೆ. ರಾಷ್ಟ್ರಮಟ್ಟದಲ್ಲಿ ಸ್ಥಿರ, ಸುಭದ್ರ ಸರ್ಕಾರ ಬೇಕೆಂದು ನೋಡುತ್ತಾರೆ. ದೂರಾಲೋಚನೆ ಇರುವ ಸಮರ್ಥ ನಾಯಕ ಬೇಕು ಎಂದು ಚಿಂತಿಸಿ ಮತ ಚಲಾಯಿಸುತ್ತಾರೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ನೋಡುತ್ತಾರೆ. ಒಟ್ಟಾರೆ ಜನರು ಈ ಭಾರಿ ಬದಲಾವಣೆ ಬಯಸಿರುವುದರಿಂದ ಎಲ್ಲಾ ೮ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಉತ್ತಮ ಜನಸ್ಪಂದನೆ ಇರುವುದರಿಂದ ಹಾಗೂ ಕಳೆದ ೩೫ ವರ್ಷ ಜಯದೇವ ಆಸ್ಪತ್ರೆಯಲ್ಲಿ ನಿರಂತರ ಸೇವೆ ಮಾಡಿರುವುದರಿಂದ ಪ್ರತಿಯೊಂದು ಊರಿನಲ್ಲೂ ನಮ್ಮ ಹೃದ್ರೋಗಿಗಳಿದ್ದಾರೆ. ಹೋದ ಕಡೆಯಲೆಲ್ಲಾ ಅವರೇ ಬಂದು ಮಾತನಾಡಿಸಿ ಬೆಂಬಲ ಸೂಚಿಸಿದ್ದಾರೆ. ನೀವು ಗೆಲ್ಲಬೇಕು ಸರ್ ಎಂದು ಆಶೀರ್ವದಿಸಿದ್ದಾರೆ. ಆದ್ದರಿಂದ ನನಗೆ ಗೆಲುವಿನ ವಿಶ್ವಾಸವಿದೆ.
ರಾಜ್ಯದಲ್ಲೂ ಬಿಜೆಪಿ ಸಹ ೨೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು ಮೋದಿಯವರು ಮತ್ತೆ ೩ನೇ ಬಾರಿಗೆ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದ ಅವರು ನಾನು ಗೆದ್ದರೂ ಸಹ ಪ್ರತಿದಿನ ೨ ಗಂಟೆ ಜನರ ಸೇವೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ, ಡಾ. ಸಂತೋಷ್, ಡಾ. ಜಯಪ್ರಕಾಶ್, ಡಾ. ವಿಶ್ವನಾಥ್, ಡಾ. ಕುಮಾರ್, ಡಾ. ಶಿಸಿರ್ ಮಿರ್ಜಾ, ಡಾ. ಸೌಜನ್ಯ, ಹಿರಿಯ ಶುಶ್ರೂಷಾಧಿಕಾರಿ ಹರೀಶ್‌ಕುಮಾರ್, ವಾಣಿ, ಚಂಪಕಮಾಲ ಹಾಜರಿದ್ದರು.