ಹಾಸನ : ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತೆ? ನಾನು ಅಲ್ಲಿದ್ದಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು ದ್ರೋಹ ಮಾಡಿದ್ದೀನಿ ಎಂದು ಜೆಡಿಎಸ್ ನಾಯಕರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.
ಅರಸೀಕೆರೆಯಲ್ಲಿ ವಿದ್ಯುತ್ ಕೆಬಲ್ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ವೇಳೆ, ಕರ್ನಾಟಕ ರಾಜ್ಯದಲ್ಲಿ ನನ್ನದೇ ಆದ ವ್ಯಕ್ತಿತ್ವ ಇದೆ. ನಾನು ಬೆಳೆದಿದ್ದೀನಿ, ರಾಜಕೀಯ ಏನು ಅಂಥ ನನಗೆ ಗೊತ್ತಿದೆ. ನೀವು ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ಕೊಡ್ತಿನಿ ಅಂತ ಹೇಳಿ ಅಧಿಕಾರ ಕೊಟ್ರಾ? ಅವರಿಗೆ ಮೋಸ ಮಾಡಿದಂತೆ ಆಗಲಿಲ್ವಾ? ಎಂದು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯದಲ್ಲಿ ಇದೆಲ್ಲದೂ ಇದ್ದಿದ್ದೇ, ನಾನೇನ್ ಕೊಲೆ, ಮೋಸ ಮಾಡಿದ್ದೀನಾ? ನನ್ನನ್ನು ಬೈಯ್ಯಲು ಒಂದು ಸಮಾವೇಶ ಮಾಡಿದ್ರು. ಅದರಲ್ಲಿ ಗೌಡ್ರು ಅವರ ಮಕ್ಕಳು ಭಾಷಣ ಮಾಡಿದ್ರು. ಪಾಪ ಆ ಅಜ್ಜ ಬರಲಿ, ಅವರ ಬಗ್ಗೆ ಗೌರವವಿದೆ, ಅವರ ಬಗ್ಗೆ ನಾನು ಮಾತನಾಡಲ್ಲ. ನೀವು ನಿಮ್ಮ ಮನೆಯವರಿಗೆ ಎಲ್ಲಾ ಸ್ಥಾನ ಕೊಡ್ತಿದ್ರಿ ಅದಕ್ಕೆ ಪಕ್ಷ ಬಿಟ್ಟೆ. ನಾವು ಸಮಾವೇಶ ಮಾಡಿ ಬೈತಿನಿ. ಯಾರ‍್ಯಾರು ಏನೇನು ಮಾಡಿದ್ರು ಅವರು ಅನುಭವಿಸಿಕೊಳ್ತಾರೆ ಎಂದಿದ್ದಾರೆ.
ಸಿದ್ದರಾಮ್ರಣ್ಣ ಮೊದಲೇ ನನಗೆ ಚೆನ್ನಾಗಿ ದುಡ್ಡು ಕೊಡುತ್ತಿದ್ರು. ಮಂತ್ರಿಗಿರಿ ಕೊಟ್ಟರೆ ಅರಸೀಕೆರೆಗೆ ಒಳ್ಳೆಯದಾಗುತ್ತೆ. ಹೋರಾಟ ಮಾಡಲು ಕಾಂಗ್ರೆಸ್‍ಗೆ ಹೋದೆ. ಇನ್ನೇನೂ ನಿಮ್ಮ ಬಾಲ ಹಿಡ್ಕಂಡು ಕೂತ್ಕೋಬೇಕಾ? ಯಾವುದಾದರೂ ಸರ್ಕಾರ ಬಂದರೆ ಜೆಡಿಎಸ್‍ನವರು ರೆಡಿ ಇರ್ತಾರೆ. ರೇವಣ್ಣಂಗೆ ಒಂದು ಮಂತ್ರಿಗಿರಿ ಕೊಡ್ತಾರೆ. ನಾನು ಸಾಯುವವರೆಗೂ ಎಂಎಲ್‍ಎ ಆಗಿ ಇರಬೇಕಾ? ನಿಮಗೆ ಹೇಗೆ ಮಂತ್ರಿ ಆಗಬೇಕು ಅಂತ ಆಸೆ ಇದೆಯೋ ನನಗೂ ಅದೇ ರೀತಿ ಆಸೆ ಇದೆ. ನಾನು ಮಂತ್ರಿ ಆಗಲೇಬೇಕು ಅಂತ ಕಾಂಗ್ರೆಸ್‍ಗೆ ಹೋಗಿದ್ದೀನಿ.
ನಾನು ಬಂದು ಅರಸೀಕೆರೆಯಲ್ಲಿ ಜೆಡಿಎಸ್ ಸಂಘಟನೆ ಮಾಡಿದ್ದೆ. ಎಷ್ಟು ಜನ ಪಾರ್ಟಿ ಬಿಟ್ಟು ಹೋಗುತ್ತಿದ್ದಾರೆ. ಇವರು ಬಿಜೆಪಿ ಜೊತೆ ಹೆಂಗೆ ಹೋದ್ರು? ನೀವು ಹೆಂಗೆ ಅಧಿಕಾರ ಹುಡಿಕೊಂಡು ಹೋಗ್ತಿರೋ ನಾನು ಹಾಗೆ. ನಾವೇನು ಸನ್ಯಾಸಿಗಳಲ್ಲ ನಮಗೂ ಆಸೆ ಇದೆ. ಇದೆಲ್ಲಾ ಬಿಟ್ಟು ಬಿಡಿ, ನಾನು ಮಣ್ಣಿಗೆ ಹೋಗುವವರೆಗೂ ಅರಸೀಕೆರೆ ಜನ ಕೈಬಿಡಲ್ಲ. ನನ್ನ ವಿರುದ್ಧ ಪ್ರಚಾರ ಮಾಡಲು ಬಂದ್ರಿ, ಮುಂದೆ ಇದೇ ತರಹ ಚುನಾವಣೆ ನಡೆದರೆ ಐವತ್ತು ಸಾವಿರ ವೋಟು ಬರಲ್ಲ ಎಂದು ಭವಿಷ್ಯ ನುಡಿದಿದ್ದಾರೆ.



