ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆಯಿಟ್ಟು ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಅದನ್ನು ಜನರ ಸೇವೆಗೆ ಬಳಕೆ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ನಡೆದ ಜನ ಸ್ಪಂದನಾ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಮಾತನಾಡಿದ ಅವರು ಅಧಿಕಾರಿಗಳು ಜನರನ್ನು ಕಚೇರಿಗಳಿಗೆ ಅಲೆಸುವುದನ್ನು ತಪ್ಪಿಸಲು ಈ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.

ಈಗಾಗಲೆ ಕ್ಷೇತ್ರದ ವ್ಯಾಪ್ತಿಯ ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಹರಿಯ ಬಿಡಲಾಗಿದ್ದು ಅದು ರೈತರ ಜಮೀನಿನ ಕಡೆಯ ಬಾಗದವರೆಗೆ ಹರಿದು ಹೋಗುವಂತೆ ನೋಡಿಕೊಳ್ಳಲಾಗಿದ್ದು ಇದರ ಜತೆಗೆ ಅಗತ್ಯವಿರುವೆಡೆ ನಾಲೆಗಳಲ್ಲಿ ಹೂಳು ತೆಗೆದಿರುವುದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜ ವಿತರಿಸಲು ಸೂಚಿಸಲಾಗಿದೆ ಎಂದರು.
ಮೇ, ೨೩ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರೊಂದಿಗೆ ಪಟ್ಟಣಕ್ಕೆ ಬೇಟಿ ನೀಡಿ ಚಾಲನೆ ನೀಡಲಾಗಿದ್ದ ನೂರಾರು ಕೋಟಿ ರೂಗಳ ಕಾಮಗಾರಿಗಳು ಆರಂಭವಾಗಿದ್ದು ನಿಗದಿತ ಅವಧಿಯಲ್ಲಿ ಅವುಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದರ ಜತೆಗೆ ಕ್ಷೇತ್ರದ ವಿವಿದ ಗ್ರಾಮಗಳು ಮತ್ತು ಪ್ರಮುಖ ರಸ್ತೆಗಳ ಅಭಿವೃದ್ದಿಗೆ ಅಗತ್ಯವಿರುವ ಹಣವನ್ನು ಸರ್ಕಾರದಿಂದ ತಂದು ಕೆಲಸ ಮಾಡಿಸುವುದಾಗಿ ಪ್ರಕಟಿಸಿದ ಶಾಸಕರು ಸಾರ್ವಜನಿಕರ ಕೆಲಸ ಮಾಡುವಾಗ ನಾನು ಜಾತಿ ಅಥವಾ ಪಕ್ಷ ರಾಜಕಾರಣ ಮಾಡದೆ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆಂದು ಪ್ರಕಟಿಸಿದರು.
ಕ್ಷೇತ್ರದ ವಿವಿದ ಬಾಗಗಳಿಂದ ಬಂದಿದ್ದ ನೂರಾರು ಜನರ ಅಹವಾಲು ಆಲಿಸಿದ ಶಾಸಕರು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಸೂಚಿಸಿದರಲ್ಲದೆ ಮತ್ತಷ್ಠು ಜನರ ಸಂಕಷ್ಠಗಳಿಗೆ ಸೂಕ್ತವಾಗಿ ಸ್ಪಂದಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್ ಅವರು ಪಾತಿಮ ಮತ್ತು ಸೈಯದ್ ಇರ್ಷಾದ್ ಅವರಿಗೆ ವೈಯುಕ್ತಿಕವಾಗಿ ೧.೩೦ ಲಕ್ಷ ಬೆಲೆಯ ಶ್ರವಣ ಸಾಧನಗಳನ್ನು ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ಕ್ಷೇತ್ರದ ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಪುರಸಭೆ ಸದಸ್ಯ ಕೋಳಿಪ್ರಕಾಶ್, ಮಾಜಿ ಸದಸ್ಯ ಅಸ್ಲಾಂ, ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹೆಚ್.ಎಂ.ಅನAತ್ ಮತ್ತು ವಿವಿದ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.