ಢಾಕಾ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಿಗದಿಯಾಗಿವೆ. ಆದರೆ ಬಾಂಗ್ಲಾದೇಶ ಮೊಂಡುವಾದ ಮುಂದುವರೆಸಿದ್ದು, ಭಾರತಕ್ಕೆ ಕ್ರಿಕೆಟ್ ಆಡಲು ಬರೊಲ್ಲ ಎಂದು ಪಟ್ಟು ಹಿಡಿದಿದೆ.
ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಹೋಗಲೇಬೇಕು ಎಂಬ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಖಡಕ್ ಸೂಚನೆಯನ್ನು ಬಾಂಗ್ಲಾದೇಶ ಕಡೆಗಣಿಸಿದ್ದು, ಐಸಿಸಿಯ ಒತ್ತಡಕ್ಕೆ ಮಣಿಯಲ್ಲ ಎಂದು ಬಾಂಗ್ಲಾ ಸರ್ಕಾರದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್‌ನ ಒತ್ತಡಕ್ಕೆ ಮಣಿದು ಐಸಿಸಿ ನಮ್ಮ ಮೇಲೆ ಒತ್ತಡ ಹೇರಿದರೆ ಮತ್ತು ನಿಬಂಧನೆಗಳನ್ನು ಹೇರಿದರೆ ಅದನ್ನು ನಾವು ಒಪ್ಪುವುದಿಲ್ಲ. ಈ ಹಿಂದೆ ಪಾಕಿಸ್ತಾನ ತಂಡ ಭಾರತಕ್ಕೆ ಹೋಗಲ್ಲ ಎಂದು ಹೇಳಿದ್ದಾಗ ಐಸಿಸಿ ಪರ್ಯಾಯ ವ್ಯವಸ್ಥೆ ಮಾಡಿತ್ತು. ಅದೇ ರೀತಿ ನಾವು ಕೂಡಾ ಪಂದ್ಯಗಳ ಸ್ಥಳಾಂತರಕ್ಕೆ ಬೇಡಿಕೆ ಇಟ್ಟಿದ್ದೇವೆ. ನಾವು ಯಾವುದೇ ಕಾರಣಕ್ಕೂ ಭಾರತದಲ್ಲಿ ಟಿ20 ವಿಶ್ವಕಪ್ ಆಡುವ ಐಸಿಸಿ ಒತ್ತಡಕ್ಕೆ ಮಣಿಯಲ್ಲ ಎಂದಿದ್ದಾರೆ.
ಇನ್ನೂ ಭಾರತದಲ್ಲಿ ಭದ್ರತೆ ಸಮಸ್ಯೆ ಇದೆ ಎಂದು ಹೇಳುತ್ತಿರುವ ಬಾಂಗ್ಲಾ, ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು ಬೇಡಿಕೆ ಇಟ್ಟಿದೆ. ಆದರೆ ಭಾರತದಲ್ಲೇ ವಿಶ್ವಕಪ್ ಆಡಬೇಕೆಂದು ಐಸಿಸಿ ಸೂಚಿಸಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಜ.21ರ ಮೊದಲು ತಿಳಿಸುವಂತೆಯೂ ನಿರ್ದೇಶಿಸಿದೆ. ಒಂದು ವೇಳೆ ಬಾಂಗ್ಲಾದೇಶ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದರೆ, ಬಾಂಗ್ಲಾದೇಶ ಬದಲಿಗೆ ಐಸಿಸಿ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್ ಟೂರ್ನಿ ಆಡಲು ಆಹ್ವಾನಿಸಲಿದೆ ಎಂದು ವರದಿಯಾಗಿದೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ 07 ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಜರುಗಲಿದ್ದು, ಇಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಭಾರತಕ್ಕೆ ಆಡಲು ಬರುತ್ತೀರೋ ಇಲ್ಲವೋ ಎಂದು ಹೇಳಲು ಐಸಿಸಿ ಕೊನೆಯ ಡೆಡ್‌ಲೈನ್ ನೀಡಿದೆ.



