ಬೆಂಗಳೂರು : ಕಾರಾಗೃಹದೊಳಗೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯಬಾರದೆಂದು ಕಾರಾಗೃಹ ಅಧಿಕಾರಿಗಳಿಗೆ ಡಿಜಿಪಿ ಅಲೋಕ್‌ಕುಮಾರ್ ತಾಕೀತು ಮಾಡಿದ್ದಾರೆ.
ಕಾರಾಗೃಹ ಇಲಾಖೆಯ ನೂತನ ಡಿಜಿಪಿ ಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದು ಪ್ರಥಮವಾಗಿ ಅವರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ, ಅಲ್ಲಿನ ಬ್ಯಾರಕ್‌ಗಳು, ಕಾರಾಗೃಹದ ಆಸ್ಪತ್ರೆ, ಟವರ್‌ಗಳನ್ನು ಪರಿಶೀಲಿಸಿ ನಂತರ ಜೈಲು ಅಧಿಕಾರಿಗಳ ಜೊತೆ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಜೈಲಿನೊಳಗೆ ಮಾದಕ ವಸ್ತುಗಳು, ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗುವವರನ್ನು ಪ್ರವೇಶದ್ವಾರದಲ್ಲೇ ಪರಿಶೀಲಿಸಿ ಅಂತವರನ್ನು ತಕ್ಷಣ ವಶಕ್ಕೆ ತೆಗೆದುಕೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಅವರು ಆದೇಶಿಸಿದ್ದಾರೆ.
ಕಾರಾಗೃಹದೊಳಗೆ ಅಕ್ರಮ ಕಂಡು ಬಂದರೆ ತಕ್ಷಣ ತಪ್ಪಿತಸ್ಥ ಸಿಬ್ಬಂದಿ,ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಲೋಕ್‌ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.



