ಬೆಂಗಳೂರು: ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರು, ನೇಕಾರರು, ಮೀನುಗಾರರ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಲಿಲ್ಲ. ಹೊಟ್ಟೆಪಾಡಿಗಾಗಿ ಗುಳೆ ಹೋಗಿರುವ ಲಕ್ಷಾಂತರ ಕೃಷಿ ಕಾರ್ಮಿಕರ ಬಗ್ಗೆ ಸಮೀಕ್ಷೆ ನಡೆಸಲಿಲ್ಲ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಲಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರಂಟಿ ಕುರಿತು ಮೂರು ದಿನಗಳ ಸಮೀಕ್ಷೆ ಯಾವ ಪುರುಷಾರ್ಥಕ್ಕಾಗಿ? ಇದರಿಂದ ಸಾಧಿಸಲು ಹೊರಟಿರುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ. ನೂರಾರು ಕೋಟಿ ಖರ್ಚು ಮಾಡಿ ಒಂದಲ್ಲ ಹತ್ತಾರು ಮೂಲಗಳಿಂದ ಗ್ಯಾರಂಟಿಗಳ ಬಗ್ಗೆ ಸಮೀಕ್ಷೆ ಮಾಡಿಸಲು ಸಿಎಂ ಸಿದ್ದರಾಮಯ್ಯನವರಿಗೆ ಎಲ್ಲಿಲ್ಲದ ಆಸಕ್ತಿ, ಆತುರ. ಕಳೆದ ೯ ತಿಂಗಳಿಂದ ರಾಜ್ಯವನ್ನು ಅಭಿವೃದ್ಧಿ ಶೂನ್ಯ ಮಾಡಿರುವ ಕಾಂಗ್ರೆಸ್ ಸರ್ಕಾರ, ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸಲು ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಟಿಫಿಕೇಟ್ ಪಡೆಯಬೇಕೆಂದು ಹಠಕ್ಕೆ ಬಿದ್ದಿದೆ ಎಂದು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಗ್ಯಾರಂಟಿ ಯೋಜನೆಗಳು ನಿಜವಾಗಿಯೂ ಜನರಿಗೆ ತಲುಪಿದ್ದರೆ, ಅದನ್ನು ಜನ ಮೆಚ್ಚಿದ್ದರೆ ಈ ಸಮೀಕ್ಷೆ ನಡೆಸುವ ಅಗತ್ಯ ಏನಿದೆ ಯಾವುದೇ ಯೋಜನೆ ಜನರ ಬದುಕಿನ ಮೇಲೆ ಬೀರಿರುವ ಪರಿಣಾಮ, ಯೋಜನೆಯ ಪೂರ್ವದಲ್ಲಿ, ಯೋಜನೆಯ ನಂತರದಲ್ಲಿ ಅದು ಜನರ ಬದುಕಿನಲ್ಲಿ ತಂದಿರುವ ಬದಲಾವಣೆ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಬೇಕಾದರೆ ಅದಕ್ಕೆ ಕನಿಷ್ಠ ೬ ತಿಂಗಳಾದರೂ ಸಮಯ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ಯೋಜನೆ ಜಾರಿಯಾಗಿ ಒಂದು ವರ್ಷವಾದರೂ ಕಳೆದಿರಬೇಕು. ಅದು ಬಿಟ್ಟು ಹೀಗೆ ತರಾತುರಿಯಲ್ಲಿ ಹೀಗೆ ಮೂರು ದಿನಗಳಲ್ಲಿ ಸಮೀಕ್ಷೆ ಮಾಡಲು ಹೇಗೆ ಸಾಧ್ಯಎಂದು ಪ್ರಶ್ನಿಸಿದ್ದಾರೆ.