ಬಾಗಲಕೋಟೆ : ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದ್ದರೆ ವೇತನ ಯಾಕೆ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಆರ್ಥಿಕ ಸ್ಥಿತಿ ಸುಭದ್ರವಾಗಿದ್ದರೆ ಮಂಡ್ಯ ಜಿಲ್ಲೆ ಸ್ವಾತಂತ್ರ್ಯ ಹೋರಾಟಗಾರರಿಗೆ 10 ತಿಂಗಳಿನಿಂದ ಪಿಂಚಣಿ ಏಕೆ ಕೊಟ್ಟಿಲ್ಲ? ವಿವಿಧ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ ಎರಡು ತಿಂಗಳಿನಿಂದ ಏಕೆ ಗೌರವಧನ ನೀಡಿಲ್ಲ? ಪೊಲೀಸ್ ಇಲಾಖೆ ಸಿಬ್ಬಂದಿಗೆ ವೇತನ ನೀಡಲು ಏಕೆ ವಿಳಂಬವಾಗಿದೆ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಸರ್ಕಾರಿ ನೌಕರರ ವೇತನ ನೀಡಲು ಸಾಲ ಮಾಡಲಾಗುತ್ತಿದೆ. ಸೌಲಭ್ಯ ಏಕೆ ನೀಡಲಾಗಿಲ್ಲ ಎಂಬುದನ್ನು ತಿಳಿದುಕೊಳ್ಳಲು ಆರ್ಥಿಕ ತಜ್ಞರೇ ಆಗಬೇಕಿಲ್ಲ. ರಾಜ್ಯದ ಆರ್ಥಿಕ ಸ್ಥಿತಿಯ ನಿಜ ಚಿತ್ರಣ ಬಿಚ್ಚಿಡುವ ಶ್ವೇತ ಪತ್ರ ಹೊರಡಿಸಿ ಸತ್ಯವನ್ನು ಮರೆಮಾಚಬೇಡಿ ಎಂದು ಒತ್ತಾಯಿಸಿದ್ದಾರೆ.
ಸರ್ಕಾರದಲ್ಲಿ ಹಣ ಇಲ್ಲದ ಕಾರಣ ಒಳ ಮೀಸಲಾತಿ, ನ್ಯಾಯಾಲಯದ ನೆಪ ಹೇಳಿ ಮೂರು ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. 2.80 ಲಕ್ಷ ಹುದ್ದೆಗಳು ಖಾಲಿ ಇದ್ದು ಯುವಕರು ಬೀದಿಗೆ ಬಂದು ಹೋರಾಟ ನಡೆಸುವಂತಾಗಿದೆ. ಕಾಂಗ್ರೆಸ್‌ನವರಿಗೆ ನಾಚಿಕೆ ಮಾನ, ಮರ್ಯಾದೆ ಇಲ್ಲ ಎಂದು ವಿಜಯೇಂದ್ರ ಟೀಕಿಸಿದ್ದಾರೆ.



