ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರಾಗಿದೆ.
ಪಿಡಿಜೆ ಕೋರ್ಟ್‌ನಿಂದ ಇಬ್ಬರು ಶ್ಯೂರಿಟಿ ಹಾಗೂ ಒಂದು ಲಕ್ಷ ರೂಪಾಯಿ ಬಾಂಡ್ ನೀಡಲು ಸೂಚಿಸಿ, ಷರತ್ತು ಬದ್ಧ ಜಾಮೀನು ನೀಡಲಾಗಿದೆ. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಜಾಮೀನು ಅರ್ಜಿ ಸಲ್ಲಿಸಿದ್ದರು. ರೀಲ್ಸ್ ಬೆಡಗಿ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು ಮಾಡಿ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ. ಏಪ್ರಿಲ್ ೫ರ ಶುಕ್ರವಾರ, ಜೈಲಿನಿಂದ ಸೋನು ಶ್ರೀನಿವಾಸ್ ಗೌಡ ಬಿಡುಗಡೆಯಾಗುವ ಸಾಧ್ಯತೆ ಇದೆ.
೭ ವರ್ಷದ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಕೆಲವೇ ದಿನಗಳ ಹಿಂದೆಯಷ್ಟೇ ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದರು. ಆದರೆ, ಸೋನು ಶ್ರೀನಿವಾಸ್ ಗೌಡ ಕಾನೂನುಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ ಎನ್ನಲಾಗಿದೆ.