ರಾಯಚೂರು : ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಯಲ್ಲಿ ಭಾರಿ ಭ್ರಷ್ಟಾಚಾರ ಹಾಗೂ ದಾಖಲೆಗಳ ನಕಲಿ ಸಲ್ಲಿಕೆ ಮೂಲಕ ಸರ್ಕಾರಿ ಗುತ್ತಿಗೆಗಳನ್ನು ಪಡೆದು ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿರುವ ಗಂಭೀರ ಆರೋಪ ಬೆಳಕಿಗೆ ಬಂದಿದ್ದು, ಗುತ್ತಿಗೆದಾರರೊಬ್ಬರು ನಕಲಿ ಪ್ರಮಾಣಪತ್ರಗಳು ಹಾಗೂ ನಕಲಿ ಕೆಲಸದ ವರದಿಗಳನ್ನು ಸಲ್ಲಿಸಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಗರಣದಲ್ಲಿ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳ ಸಹಭಾಗಿತ್ವವಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸುಮಾರು ₹3.48 ಕೋಟಿ ಸಾರ್ವಜನಿಕ ಹಣವನ್ನು ಅಕ್ರಮವಾಗಿ ಬಳಸಿಕೊಂಡಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.
ಇನ್ನೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, ನಕಲಿ ಕೆಲಸದ ವರದಿಗಳ ಆಧಾರದ ಮೇಲೆ ಹಣ ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರ ಇದೀಗ ಇಲಾಖೆಯೊಳಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಗರಣ ಬಹಿರಂಗವಾಗುತ್ತಿದ್ದಂತೆ ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಮತ್ತು ಇಲಾಖಾ ಕ್ರಮದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಪ್ರಕರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. ಜೊತೆಗೆ, ನಕಲಿ ಗುತ್ತಿಗೆದಾರರು ಮತ್ತು ಸಹಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದ್ದು, ಈ ಹಗರಣದ ಬಗ್ಗೆ ಸರ್ಕಾರ ಮತ್ತು ಸಂಬಂಧಿತ ಸಚಿವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ಗಮನ ಸೆಳೆಯುತ್ತಿದೆ.



