ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿರಜನೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್ ಒತ್ತಾಯಿಸಿದ್ದಾರೆ.
ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಗೌರವಾನ್ವಿತ ಮಹಿಳೆಯ ವಿಚಾರದಲ್ಲಿ ಕೀಳು ಹೇಳಿಕೆ ನೀಡಿರುವುದು ಅವರ ಅಭಿರುಚಿಗೆ ಹಿಡಿದ ಕೈಗನ್ನಡಿಯಾಗಿದ್ದು ಇವರ ವಿರುದ್ದ ಮಹಿಳಾ ಆಯೋಗದವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಹಿಂದೆ ರವಿಕುಮಾರ್ ಕಲ್ಬುರ್ಗಿ ಜಿಲ್ಲಾಧಿಕಾರಿಗಳ ವಿರುದ್ದ ಅವರ ಚಾರಿತ್ರ ಹರಣವಾಗುವಂತೆ ಮಾತನಾಡಿ ಸಮಾಜದ ಸಾಮರಸ್ಯ ಕೆಡುವಂತೆ ಮಾಡುವುದರ ಜತೆಗೆ ಆನಂತರ ಕ್ಷಮೆ ಕೇಳಿ ಮುಖ ಭಂಗಕ್ಕೆ ಒಳಗಾಗಿದ್ದರು ತಮ್ಮ ಚಾಳಿಯನ್ನು ಬಿಡದ ಇವರ ವಿರುದ್ದ ಬಿಜೆಪಿ ಮುಖಂಡರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಸಚಿವರೊಬ್ಬರು ಮಿಲಿಟರಿಯ ಉನ್ನತ ಅಧಿಕಾರಿಯ ಕುರಿತು ಮಾತನಾಡುವಾಗ ಉಗ್ರಗಾಮಿ ಸಹೋದರಿಯನ್ನು ಯುದ್ದಕ್ಕೆ ಕಳುಹಿಸುತ್ತಿದ್ದೇವೆ ಎಂದು ಮಾತನಾಡಿದ್ದು ನಮ್ಮ ಕಣ್ಣ ಮುಂದೆ ಇರುವ ಸಾಕ್ಷಿಯಾಗಿದ್ದು ಇಂತಹ ಹೇಳಿಕೆಗಳು ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಇರುವ ಗೌರವವನ್ನು ಎತ್ತಿ ತೋರಿಸುತ್ತವೆ ಎಂದಿದ್ದಾರೆ.
ಕೂಡಲೇ ರವಿಕುಮಾರ್ ಅವರ ವಿಧಾನ ಪರಿಷತ್ ಸದಸ್ಯತ್ವ ವಜಾ ಮಾಡುವ ಜತೆಗೆ ಬಂದಿಸಿ ಜೈಲಿಗಟ್ಟದಿದ್ದರೆ ಕಾಂಗ್ರೆಸ್ ಮಹಿಳಾ ಘಟಕ ಮತ್ತು ಪಕ್ಷದ ವತಿಯಿಂದ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂಬoದ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರಾದ ಡಿ.ರವಿಶಂಕರ್ ಅವರ ಜತೆ ಚರ್ಚಿಸಿ ರವಿಕುಮಾರ್ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.