Tuesday, July 1, 2025
Google search engine

Homeರಾಜ್ಯಸುಳ್ಳು ಸುದ್ದಿಗಳ ಯುಗದಲ್ಲಿ ನಿಜ ಸುದ್ದಿಗೆ ಸಮರ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ಯುಗದಲ್ಲಿ ನಿಜ ಸುದ್ದಿಗೆ ಸಮರ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: “ನಿಜ ಸುದ್ದಿಗಾಗಿ ಸಮರ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ತಾನೇ ಅರ್ಥ ಮಾಡಿಕೊಳ್ಳಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ – 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಾಧ್ಯಮಗಳು ಅಧಿಕಾರಸ್ಥರ ಓಲೈಕೆ ಮಾಡಬಾರದು. ನಾನೂ ಸಹ ಓಲೈಕೆಗೆ ವಿರುದ್ಧ” ಎಂದು ಹೇಳಿದರು.

ಪತ್ರಕರ್ತರ ಉಚಿತ ಬಸ್ ಪಾಸ್ ಹಾಗೂ ‘ಆರೋಗ್ಯ ಸಂಜೀವಿನಿ’ ಯೋಜನೆ ಉದ್ಘಾಟಿಸಿ ಅವರು, “ಇವು ಸತ್ಯೋನ್ಮುಖ ಪತ್ರಿಕೋದ್ಯಮಕ್ಕಾಗಿ. ನಮ್ಮ ಪರವಾಗಿ ಬರೆಯಲಿ ಎಂಬ ಉದ್ದೇಶದಿಂದಲ್ಲ” ಎಂದು ಸ್ಪಷ್ಟಪಡಿಸಿದರು.

“ಊಹಾ ಪತ್ರಿಕೋದ್ಯಮ ಸಮಾಜಕ್ಕೂ ಅಪಾಯ. ನಾನು ಸತ್ಯದ ಭಕ್ತ. ನನ್ನ ಕಾರಿನ ಮೇಲೆ ಕಾಗೆ ಕೂತಿದ್ದು ಟಿವಿಗಳಲ್ಲಿ ಚರ್ಚೆಯಾಗುವುದು ಪತ್ರಿಕೋದ್ಯಮವಲ್ಲ, ಮೂಢನಂಬಿಕೆಗೆ ಪ್ರೋತ್ಸಾಹ” ಎಂದು ಹೇಳಿದರು.

ಸಮಾಜದಲ್ಲಿ ದ್ವೇಷ ಹರಡುವ ಪ್ರಯತ್ನಗಳಿಗೆ ಮಾಧ್ಯಮಗಳು ಬೆಂಬಲ ನೀಡಬಾರದು. “ಪತ್ರಿಕೋದ್ಯಮವು ಸಂವಿಧಾನ ಮೌಲ್ಯಗಳ ಪರವಾಗಿರಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗುವ, ಜಾತಿ-ವರ್ಗ ಭೇದ ರಹಿತ ಸಮಾಜ ನಿರ್ಮಾಣವಾಗಬೇಕೆಂಬುದು ಸಂವಿಧಾನದ ಆಶಯ. ಪತ್ರಿಕೆಗಳು ಈ ಆಶಯಕ್ಕೆ ಬದ್ಧವಾಗಿರಬೇಕು” ಎಂದು ಅವರು ಹುರಿದುಂಬಿಸಿದರು.

“ನನ್ನ ಮಾತುಗಳನ್ನು ಕೇವಲ ರಾಜಕೀಯ ಪ್ರಸ್ತಾಪವಾಗಿ ನೋಡದೆ, ಸಾಮಾಜಿಕ ಜವಾಬ್ದಾರಿಯ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಿ” ಎಂಬ ಕರೆ ನೀಡಿದ ಸಿಎಂ, ನಿಜ ಸುದ್ದಿಗಾಗಿ ನಿರ್ಭೀತಿಯಿಂದ ಹೋರಾಡುವ ಪತ್ರಕರ್ತರಿಗೆ ಧನ್ಯವಾದವನ್ನೂ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular