ಗುಂಡ್ಲುಪೇಟೆ: ಕಾನೂನಿನ ಅರಿವಿನ ಕೊರತೆ ಕಾರಣ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ವಕೀಲ ಮಹದೇವು ತಿಳಿಸಿದರು.
ತಾಲೂಕಿನ ಸೋಮಹಳ್ಳಿ ಶ್ರೀ ಗಂಗಾಧರೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯಿದೆ, ಮಕ್ಕಳ ಹಕ್ಕುಗಳು ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯಿದೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಾಲ್ಯ ವಿವಾಹ ಮಾಡುವುದರಿಂದ ಕುಟುಂಬಕ್ಕಲ್ಲದೇ ಸಮಾಜದ ಮೇಲೂ ಮಾರಕ ಪರಿಣಾಮ ಆಗುತ್ತದೆ. ಆದ್ದರಿಂದ ಬಾಲ್ಯ ವಿವಾಹದ ಬಗ್ಗೆ ತಿಳುವಳಿಕೆ ಹೊಂದಬೇಕು. ಸಮಾಜದಲ್ಲಿ ಎಲ್ಲ ರೀತಿಯ ಜನರು ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುವಂತೆ ಕಾನೂನು ರೂಪಿಸಲಾಗಿದೆ. ಆದ್ದರಿಂದ ಸಂವಿಧಾನದ ಚೌಕಟ್ಟಿನಲ್ಲಿ ಜೀವನ ನಡೆಸಬೇಕಿರುವ ಕಾರಣ ಪ್ರತಿಯೊಬ್ಬರು ಕಾನೂನು ಜ್ಞಾನ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳು ಬಾಲ್ಯವನ್ನು ಮುಕ್ತವಾಗಿ ಕಳೆಯಬೇಕು. ಇದೇ ಕಾರಣಕ್ಕೆ ಉಚಿತ ಶಿಕ್ಷಣದ ಜತೆಗೆ ಸಾಕಷ್ಟು ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಕುಟುಂಬ ನಿರ್ವಹಣೆ ಇತರೆ ಕಾರಣ ನೀಡಿ ಮಕ್ಕಳನ್ನು ದುಡಿಮೆ ಹಚ್ಚಲಾಗುತ್ತಿದ್ದು, ಇದು ತಪ್ಪಬೇಕು. ಕಾನೂನು ಸೇವೆಗಳ ಪ್ರಾಧಿಕಾರ ಜನರ ಬಳಿಗೆ ಕಾನೂನು ಜ್ಞಾನ ತಲುಪಲೆಂದು ಇಂತಹ ಕಾರ್ಯಕ್ರಮ ನಡೆಸುತ್ತಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಷಾರಾಣಿ, ವಕೀಲ ಶ್ರೀನಿವಾಸ ಪ್ರಸಾದ್, ಸಮಷ್ಟ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಾರ್ಯ ನಿರ್ವಾಹಕ ಗಂಗಾಧರಸ್ವಾಮಿ, ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.