ಮೈಸೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜನರಿಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಾರ್ವಜನಿಕರು ಜನದಟ್ಟಣೆಯ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಇತ್ತೀಚೆಗಷ್ಟೇ 35 ಮಂದಿಗೆ ಸೋಂಕು ದೃಢಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು, ಸರ್ಕಾರ ಮತ್ತು ಆರೋಗ್ಯ ಇಲಾಖೆ ತ್ವರಿತ ಕ್ರಮ ಕೈಗೊಂಡಿದೆ. ಈ ಹಿನ್ನಲೆಯಲ್ಲಿ, ಮೇ 25ರಿಂದ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಮತ್ತೆ ಆರಂಭಿಸಲು ನಿರ್ಧಾರ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ನಿಜವಾದ ಮುನ್ನೆಚ್ಚರಿಕೆ ಮಾದರಿ:
ಕೊರೊನಾ ಸೋಂಕು ಮತ್ತೆ ಹರಡಬಾರದೆಂಬ ದೃಷ್ಟಿಯಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಮಾಸ್ಕ್ ಧರಿಸಿ ಮೈಸೂರಿನ ತಮ್ಮ ನಿವಾಸದ ಬಳಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ. “ಮುಂಜಾಗೃತೆಯೇ ಮುಕ್ತಿಗೆ ಮಾರ್ಗ,” ಎಂಬ ಮನೋಭಾವವನ್ನು ವ್ಯಕ್ತಪಡಿಸುತ್ತಿರುವ ಸಿಎಂ, ಎಲ್ಲರಿಗೂ ಎಚ್ಚರಿಕೆ ವಹಿಸಲು ಕರೆ ನೀಡಿದ್ದಾರೆ.
ಕೋವಿಡ್ ಲ್ಯಾಬ್‌ಗಳ ಮರುಸಕ್ರಿಯತೆ:
ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್‌ಗಳನ್ನು ಪುನಃ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಆರೋಗ್ಯ ಇಲಾಖೆಯು ತ್ವರಿತ ಪರೀಕ್ಷಾ ವಿಧಾನಗಳು ಹಾಗೂ ಆರ್‌ಟಿಪಿಸಿಆರ್ ಪರೀಕ್ಷೆಗಳ ವ್ಯವಸ್ಥೆ ಗಟ್ಟಿಯಾಗಿ ಜಾರಿಗೊಳಿಸುತ್ತಿದೆ.