Friday, May 23, 2025
Google search engine

Homeರಾಜ್ಯಸುದ್ದಿಜಾಲಮಾಶಾಸನ ಹತ್ತುಪಟ್ಟು ಹೆಚ್ಚಿಸಿರಿ: ಶಾಸಕ ವೈ.ಎಂ.ಸತೀಶ್

ಮಾಶಾಸನ ಹತ್ತುಪಟ್ಟು ಹೆಚ್ಚಿಸಿರಿ: ಶಾಸಕ ವೈ.ಎಂ.ಸತೀಶ್

ಬಳ್ಳಾರಿ: ಜಿಲ್ಲೆಯಲ್ಲಿ ಅಂಧ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಇಲ್ಲದ ಕಾರಣ ಸರ್ಕಾರ ಭೂಮಿ ನೀಡಿದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಸ್ವಂತದ ಹಣದಲ್ಲಿ ಕಟ್ಟಿಸಿ ಸರ್ಕಾರಕ್ಕೆ ನೀಡುವೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಮನವಿ ಮಾಡಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಮೇಲ್ಮನೆಯ ಪ್ರಶ್ನೋತ್ತರ ಕಲಾಪದಲ್ಲಿ, ವಿಕಲಚೇತನರ ಮಾಶಾಸನ ಹೆಚ್ಚಳದ ವಿಷಯ ಪ್ರಸ್ತಾಪಿಸಿ, ಬಳ್ಳಾರಿಯಲ್ಲಿ ಅಂಧ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಇಲ್ಲ. ಸರ್ಕಾರ ನಿವೇಶನವನ್ನು ನೀಡಿದಲ್ಲಿ ಸ್ವಂತದ ಹಣದಲ್ಲಿ ಆಧುನಿಕವಾದ – ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಸರ್ಕಾರಕ್ಕೆ ನೀಡುವೆ ಎಂದು ಕಲಾಪಕ್ಕೆ ತಿಳಿಸಿದರು.

ಸರ್ಕಾರ ಪರಿಣಿತ, ತಜ್ಞ ಮತ್ತು ಅರ್ಹ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅಗತ್ಯವಿದ್ದಲ್ಲಿ ಸಿಬ್ಬಂದಿಯ ನೇಮಕಾತಿಯಲ್ಲೂ ಸರ್ಕಾರಕ್ಕೆ ನೆರವಾಗುವೆ ಎಂದಾಗ, ಸದನದಲ್ಲಿದ್ದ ಎಲ್ಲಾ ಸದಸ್ಯರು ಶಾಸಕರ ಸೇವಾ ಮನೋಭಾವನ್ನು ಮುಕ್ತ ಕಂಠದಿಂದ ಪ್ರಶಂಸಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ವಿಕಲಚೇತನರ ದೈಹಿಕ ನ್ಯೂನ್ಯತೆಯ ಪ್ರಮಾಣ ಆಧರಿಸಿ ಸರ್ಕಾರ ಅವರಿಗೆ ಮಾಸಿಕ ರೂ.600, 800 ಮತ್ತು 1000 ಗೌರವ ಮಾಶಾಸನವನ್ನು ಪಾವತಿಸುತ್ತಿದೆ. ಈ ಮೊತ್ತದಿಂದ ದೈಹಿಕ ವಿಕಲಚೇತನರು ಇಂದಿನ ದಿನಮಾನಗಳಲ್ಲಿ ಗೌರವಯುತವಾಗಿ ಜೀವನ ನಡೆಸಲು ಸಾಧ್ಯವಿಲ್ಲ. ವಿಕಲಚೇತನ ಮಗನ ಪೋಷಕನಾಗಿ ಅಂತಹ ಮಗುವಿನ ಆರೈಕೆಯಲ್ಲಿರುವ ಸವಾಲುಗಳು ನನಗೆ ಚೆನ್ನಾಗಿ ಅನುಭವಕ್ಕೆ ಬಂದಿವೆ. ನನ್ನ ಮಗನು ನನಗೇನು ಸಮಸ್ಯೆ ಆಗಿಲ್ಲ. ಆದರೆ, ಆರ್ಥಿಕ ಸಂಕಷ್ಟದಲ್ಲಿರುವ ವಿಕಲಚೇತನರ ಪೋಷಕರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಈ ವಿಚಾರವನ್ನು ಪ್ರಸ್ತಾಪ ಮಾಡಿರುವೆ ಎಂದರು.

ವಿಕಲಚೇತನರಿಗೆ ಗೌರವ ಮಾಸಾಶನ ನೀಡುವಲ್ಲಿ ಸರ್ಕಾರ ಕೇಳುವ ಜಾತಿ, ಆದಾಯ ಪ್ರಮಾಣ ಪತ್ರ ಸೇರಿ ಇನ್ನಿತರೆ ಷರತ್ತುಗಳನ್ನು – ನಿಯಮಗಳನ್ನು ತಕ್ಷಣವೇ ಸಡಿಸಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ವಿಕಲಚೇತನರನ್ನು ದೇವರ ಮಕ್ಕಳು ಎನ್ನುವ ನಾವುಗಳು, ಅವರಲ್ಲಿ ಜಾತಿ, ಆದಾಯ ಇನ್ನಿತರೆಗಳ ಕಾರಣಕ್ಕಾಗಿ ಸರ್ಕಾರ ತಾರತಮ್ಯ ಮಾಡುವುದು ಬೇಡ. ವಿಕಲಚೇತನರೆಲ್ಲರೂ ಒಂದೇ ಎನ್ನುವ ನೀತಿ ನಮ್ಮದಾಗಲಿ. ಮಾಶಾಸನ ಪಡೆಯುವ ಆಯ್ಕೆಯ ಸ್ವಾತಂತ್ರ್ಯವನ್ನು ವಿಕಲಚೇತನರು ಅಥವಾ ಅವರ ಕುಟುಂಬದ ಸದಸ್ಯರಿಗೇ ನೀಡೋಣ ಎಂದು ಮನವಿ ಮಾಡಿದರು.

ಬಳ್ಳಾರಿಯಲ್ಲಿರುವ ಮೂಗ ಮತ್ತು ಕಿವುಡ ವಿದ್ಯಾರ್ಥಿಗಳ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಈ ಕುರಿತು ತುರ್ತಾಗಿ ಕ್ರಮಕೈಗೊಳ್ಳಬೇಕು. ಈ ಶಾಲೆಯ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರ ತುರ್ತಾಗಿ ಕ್ರಮಕೈಗೊಂಡು ಶಿಕ್ಷಕರ ನೇಮಕಾತಿ, ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular