ಬೆಂಗಳೂರು : ಬಿಜೆಪಿ ಆಂತರಿಕ ಕಲಹದಿಂದ ಅಡ್ಡ ಮತದಾನವಾಗಿದೆ. ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯೇ ಕಾರಣ ಎಂದು ಶಾಸಕ ಎಸ್.ಟಿ ಸೋಮಶೇಖರ್ ಗುಡುಗಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್, ಬಿಜೆಪಿಯವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ. ವಿಜಯೇಂದ್ರ ಕಡೆಯವರನ್ನ ಅಶೋಕ್ ಸೋಲಿಸಬೇಕು ಅಶೋಕ್ ಕಡೆಯವರನ್ನ ವಿಜಯೇಂದ್ರ ಸೋಲಿಸಬೇಕು ಅಂತಾ ಅಡ್ಡ ಮತದಾನ ಮಾಡಿಸಿರಬೇಕು. ಅವರಿಬ್ಬರು ಮೊದಲು ಧರ್ಮಸ್ಥಳದಲ್ಲಿ ಆಣೆ ಮಾಡಲಿ ಬೇರೆ ಯಾರೂ ಪ್ರಮಾಣ ಮಾಡೋದು ಬೇಕಿಲ್ಲ. ಅವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದರು.
ಬಿಜೆಪಿಗೆ ಸೋಮಶೇಖರ್, ಹೆಬ್ಬಾರ್ ರಾಜೀನಾಮೆ ನೀಡಲಿ ಎಂಬ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಅವರಿಗೆ ತಿರುಗೇಟು ನೀಡಿದ ಎಸ್.ಟಿ ಸೋಮಶೇಖರ್, ಇಷ್ಟೆಲ್ಲಾ ಅವಾಂತರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಣ. ಶೋಭಾ ಕರಂದ್ಲಾಜೆ ಅವರಿಗೆ ಅಶೋಕ್ ಕಂಡರೆ ಆಗಲ್ಲ. ವಿಜಯೇಂದ್ರ ಕಂಡರೂ ಆಗಲ್ಲ. ಬಿಜೆಪಿಯಲ್ಲಿ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ಕಾರಣ. ಮೊದಲು ಈ ಕರಂದ್ಲಾಜೆಯನ್ನ ಧರ್ಮಸ್ಥಳದಲ್ಲಿ ಹೋಗಿ ನಿಲ್ಲಿಸಲಿ ಎಂದು ಹರಿಹಾಯ್ದರು.
ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ. ನಾವು ಅವರಿಗೆ ಮತ ಹಾಕಿದ್ದೇವೆ. ನಾವು ಓಪನ್ ಆಗಿಯೇ ಮತ ಹಾಕಿದ್ದೇವೆ ಎಂದು ಹೇಳಿದ್ದೇವೆ. ಬಿಜೆಪಿಯಲ್ಲಿ ಅಡ್ಡ ಮತದಾನ ಹಾಕಿದವರು ಯಾರು ಅಂತಾ ಪತ್ತೆ ಹಚ್ಚಲಿ. ನನ್ನ ಕೆಣಕೋದು ಬೇಡ. ಕೆಣಕಿದರೆ ನಾವೂ ತಕ್ಕ ಉತ್ತರ ಕೊಡುತ್ತೇವೆ ಎಂದು ಟಾಂಗ್ ಕೊಟ್ಟರು.



