ಮಂಡ್ಯ: ಇತ್ತೀಚಿನ ದಿನಗಳಲ್ಲಿ ವಿಸಿ ನಾಲಾ ವ್ಯಾಪ್ತಿಯಲ್ಲಿ ಅಪಘಾತಗಳು ಹೆಚ್ಚುತ್ತಿದ್ದು ಅದನ್ನು ತಡೆಗಟ್ಟಲು ತಾಂತ್ರಿಕಾ ವರದಿಯೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಾಲೆಗಳು ಹಾಗೂ ಕೆರೆಗಳ ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಬಗ್ಗೆ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ನಾಲೆಗಳ ಭಾಗದಲ್ಲಿ ಶಿವಳ್ಳಿ, ಗಮನಹಳ್ಳಿ ಹಾಗೂ ಬಾನಘಟ್ಟದಲ್ಲಿ ಒಟ್ಟು ೩ ರಸ್ತೆ ಅಪಘಾತ ಸಂಭವಿಸಿ ೧೧ ಜನ ಮೃತಪಟ್ಟಿದ್ದಾರೆ. ಅಪಘಾತ ಗಳನ್ನು ತಡೆಗಟ್ಟಲು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಾಲೆಗಳು ಕೆರೆಗಳ ಬದಿಗಳಲ್ಲಿ ತಡೆಗೋಡೆ ಬ್ಯಾರಿಯರ್ ನಿರ್ಮಿಸಿ ನಿರ್ವಹಣೆ ಮಾಡಲು ಸಮಿತಿ ರಚಿಸಲಾಗಿತ್ತು ಸಮಿತಿಯು ತಡೆಗೋಡೆ ನಿರ್ಮಾಣ ಸಂಬಂಧಿಸಿದಂತೆ ವರದಿ ಸಲ್ಲಿಸಿದೆ ಎಂದರು.
ರಸ್ತೆ ಉಬ್ಬುಗಳಿರುವ ಕೆಲವು ಕಡೆ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಅಧಿಕಾರಿ ಗಳು ಜಂಟಿ ಸಮೀಕ್ಷೆ ನಡೆಸಿ ಈ ಬಗ್ಗೆ ಕ್ರಮ ವಹಿಸಬೇಕು ಎಂದರು. ಅಪಘಾತ ಹೆಚ್ಚು ಉಂಟಾಗುವ ಸ್ಥಳಗಳಲ್ಲಿ ರಸ್ತೆ ಉಬ್ಬು ನಿರ್ಮಾಣ (ಹಂಪ್) ಸಂಚಾರಿ ನಿಯಮಗಳ ಎಚ್ಚರಿಕೆ ಫಲಕಗಳ ಅಳವಡಿಕೆ, ತಡೆಗೋಡೆ ನಿರ್ಮಾಣ ಹಾಗೂ ಇನ್ನಿತರ ವಿಷಯ ಗಳ ಬಗ್ಗೆ ಸಮಿತಿ ವರದಿ ನೀಡಿದೆ. ಇದನ್ನು ತಾಂತ್ರಿಕ ತಜ್ಞರು ಪರಿಶೀಲಿಸಿ ಸಂಪೂರ್ಣ ವಾದ ವರದಿ ನೀಡಬೇಕಿದೆ ಎಂದರು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ವಿಸಿ ನಾಲಾ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಅದನ್ನು ತಡೆಗಟ್ಟಲು ವರದಿಯನ್ನು ಬೇಗನೆ ಸಿದ್ದಪಡಿಸಿ ಎಂದರು.
ಬೈಕ್, ಕಾರು, ಆಟೊ ರಿಕ್ಷಾ, ವ್ಯಾನ್‌ಗಳಲ್ಲಿ ಆನೇಕ ಜನ ಸಾಮಾನ್ಯರು ದಿನನಿತ್ಯ ಸಂಚರಿಸುತ್ತಿರುತ್ತಾರೆ ಅವರಿಗೆ ಗೋಚರಿಸುವಂತೆ ಸಂಚಾರಿ ನಿಯಮಗಳ ಜಾಗೃತಿ ಫಲಕ ಅಳವಡಿಸಬೇಕು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಹರ್ಷ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಡಾ ಸಿದ್ದೇಗೌಡ, ಸಿ ಶಂಕರ್, ಎಂ ಶಿವಕುಮಾರ್, ನಂದಕುಮಾರ್, ಮನೋಜ್, ರಾಕೇಶ್,ಹನುಮಂತ, ವಿಜಯಕುಮಾರ್, ಮನು ಕುಮಾರ್, ಸಿಂಚನ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.