ಕೋಲಾರ: ಕೋಲಾರ ತಾಲ್ಲೂಕಿನ ಶ್ರೀನಿವಾಸಪುರ ರಸ್ತೆಯ ವೀರಾಪುರ ಗೇಟ್ ಬಳಿಯ ಮಹರ್ಷಿ ಶಾಲೆ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಅಣ್ಣ-ತಂಗಿ ಇಬ್ಬರು ದುರ್ಮರಣಕ್ಕೊಳಗಾಗಿದ್ದಾರೆ. ಕೊಂಡೇನಹಳ್ಳಿ ನಿವಾಸಿಗಳಾದ ಹರ್ಷಿತ್ ಸಿಂಗ್ (20) ಮತ್ತು ಯಶಸ್ವಿನಿ ಬಾಯಿ (16) ಮೃತಪಟ್ಟವರು. ತಂಗಿಯ ಪಿಯುಸಿ ಅಡ್ಮಿಷನ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ, ಇನ್ನೋವಾ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ತಂದೆ-ತಾಯಿ ಕೂಲಿಯನ್ನು ನಂಬಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು. ಹರ್ಷಿತ್ ಪದವಿ ವಿದ್ಯಾರ್ಥಿ, ಯಶಸ್ವಿನಿ ಪಿಯುಸಿ ಓದುತ್ತಿದ್ದರು. ದಿನವೂ ಬಸ್‌ನಲ್ಲಿ ತೆರಳುತ್ತಿದ್ದ ಇಬ್ಬರು, ಆ ದಿನ ದಾಖಲೆ ಮರೆತ ಕಾರಣದಿಂದ ಬೈಕ್‌ನಲ್ಲಿ ಕಾಲೇಜಿಗೆ ಹೋದರು. ವಾಪಸ್ಸಾಗುತ್ತಿದ್ದ ವೇಳೆ, ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದು ಯಶಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದರು, ಹರ್ಷಿತ್ ಆಸ್ಪತ್ರೆಗೆ ಕರೆದೊಯ್ಯುವಲ್ಲೇ ಮೃತಪಟ್ಟರು.
ಇದೀಗ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು, ಇನ್ನೋವಾ ಕಾರು ಹಾಗೂ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.