ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಒಳ ಮೀಸಲಾತಿ ವರ್ಗೀಕರಣದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದ್ದು ಜಿಲ್ಲೆಯ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಹಿಂದುಳಿದ ಮಾದಿಗ ಸಮುದಾಯಕ್ಕೆ ಶೇ.6 ಮೀಸಲಾತಿ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಮುನ್ನುಡಿ ಹಾಕಿದ್ದಾರೆ ಎಂದು ಹೇಳಿದರು. ಪತ್ರಿಕಾ ಹೇಳಿಕೆ ನೀಡಿರುವ ತಾಲ್ಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಮಧುವನಹಳ್ಳಿ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ನ್ಯಾ.ನಾಗಮೋಹನದಾಸ್ ವರದಿಯನ್ವಯ ಮಾದಿಗ ಸಮುದಾಯಕ್ಕೆ ಶೇ.6 ಮೀಸಲಾತಿ ನೀಡುವ ಮೂಲಕ ಆ ಸಮುದಾಯದ ಜನರು ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮಾದಿಗ ಸಂಘಟನೆಗಳು ಹಲವು ದಶಕಗಳಿಂದ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಸಾಕಷ್ಟು ಚಳವಳಿಗಳನ್ನು ಮಾಡಿದ್ದವು. ನ್ಯಾಯಾಲಯದಲ್ಲಿಯೂ ಕೂಡ ಈ ಬಗ್ಗೆ ವಾದ ಮಂಡನೆ ಮಾಡಲಾಗಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಶೀಘ್ರವಾಗಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾದಿಗ ಸಮುದಾಯದ ಎಡಗೈ ಸಮುದಾಯಕ್ಕೆ ಶೇ.6 ಒಳ ಮೀಸಲಾತಿಯನ್ನು ನೀಡಿದೆ. ಈ ನಿರ್ಧಾರವನ್ನು ಮಾದಿಗ ಸಮುದಾಯದ ಪ್ರತಿಯೊಬ್ಬರೂ ಸ್ವಾಗತಿಸುತ್ತೇವೆ ಎಂದರು. ಹಕ್ಕು ಮತ್ತು ಅವಕಾಶಗಳಿಗಾಗಿ ಅನೇಕ ವರ್ಷಗಳಿಂದ ಸಮು ದಾಯಗಳು ಹೋರಾಟ ಮಾಡುವುದರ ಮೂಲಕ ಈಗ ಯಶಸ್ಸು ಸಾಧಿಸಿವೆ. ಸಮುದಾಯದ ಒಗ್ಗಟಿನಿಂದ ಯಾವುದೇ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಂತಾಗಿದೆ ಎಂದರು.
ಒಳ ಮೀಸಲಾತಿಯಿಂದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಬದುಕನ್ನು ಸಮರ್ಥವಾಗಿ ಕಟ್ಟಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವುದಕ್ಕೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ನಡೆ ಶ್ಲಾಘನೀಯ ಎಂದರು. ಸಚಿವ ಸಂಪುಟದಲ್ಲಿ ವರದಿಯ ಪರ-ವಿರುದ್ದ ಧ್ವನಿಗಳು ಸದ್ದು ಮಾಡಿದ್ದವು. ಅಂತಿಮವಾಗಿ ವರದಿಯನ್ನು ಪರಿಷ್ಕರಿಸಿ, ಎಡ-ಬಲ ಸಮುದಾಯಗಳ ಅಸಮಾಧಾನವನ್ನು ಹೋಗಲಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಸಮುದಾಯದವರಿಗೆ ಹರ್ಷ ತಂದಿದೆ. ಸಮುದಾಯದವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸ ಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಬೇಕು ಎಂದರು.
ಒಳ ಮೀಸಲಾತಿ ಜಾರಿಯಲ್ಲಿ ಯಾವುದೇ ಅಡೆ ತಡೆಗಳು ಬಂದರೂ ಅದನ್ನೆಲ್ಲಾ ಮೆಟ್ಟಿ ನಿಂತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಮೀಸಲಾತಿ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ರಾಜ್ಯದಲ್ಲಿ ಮಾದಿಗ ಸಮುದಾಯ ಅಭಿನಂದಿಸುತ್ತದೆ ಎಂದಿದ್ದಾರೆ.