Tuesday, April 7, 2026
Google search engine

Homeದೇಶಒಂದೇ ರಾತ್ರಿಯಲ್ಲಿ ಇರಾನ್ ಉಡೀಸ್': ಟ್ರಂಪ್ ಎಚ್ಚರಿಕೆಗೆ ಕೆರಳಿದ ಇರಾನ್, ಯುದ್ಧದ ಭೀತಿಯಲ್ಲಿ ಮಧ್ಯಪ್ರಾಚ್ಯ!

ಒಂದೇ ರಾತ್ರಿಯಲ್ಲಿ ಇರಾನ್ ಉಡೀಸ್’: ಟ್ರಂಪ್ ಎಚ್ಚರಿಕೆಗೆ ಕೆರಳಿದ ಇರಾನ್, ಯುದ್ಧದ ಭೀತಿಯಲ್ಲಿ ಮಧ್ಯಪ್ರಾಚ್ಯ!

ವಾಷಿಂಗ್ಟನ್/ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ದಿನದಿಂದ ದಿನಕ್ಕೆ ಭೀಕರವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೀಡಿರುವ ‘ಡೆಡ್‌ಲೈನ್’ ಈಗ ಜಗತ್ತನ್ನೇ ನಡುಗುವಂತೆ ಮಾಡಿದೆ. ಮಂಗಳವಾರ (ಏಪ್ರಿಲ್ 7) ರಾತ್ರಿಯೊಳಗೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ, ಕೇವಲ ನಾಲ್ಕು ಗಂಟೆಗಳಲ್ಲಿ ಇಡೀ ದೇಶವನ್ನು ನಾಶಪಡಿಸುವುದಾಗಿ ಟ್ರಂಪ್ ಗುಡುಗಿದ್ದಾರೆ.

ಟ್ರಂಪ್ ನೀಡಿದ ಆ ಭೀಕರ ಎಚ್ಚರಿಕೆ ಏನು?

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಂಪ್, ಇರಾನ್ ವಿರುದ್ಧ ಅತ್ಯಂತ ಕಠಿಣ ಪದಗಳನ್ನು ಬಳಸಿದ್ದಾರೆ.

“ನಮ್ಮ ಬಳಿ ಬಲಿಷ್ಠ ಸೇನಾ ಯೋಜನೆಯಿದೆ. ಮಂಗಳವಾರ ರಾತ್ರಿ 12 ಗಂಟೆಯೊಳಗೆ ಇರಾನ್‌ನ ಪ್ರತಿಯೊಂದು ಸೇತುವೆಯನ್ನು ಧ್ವಂಸಗೊಳಿಸಲಾಗುವುದು. ಅಲ್ಲಿನ ಪ್ರತಿಯೊಂದು ವಿದ್ಯುತ್ ಸ್ಥಾವರಗಳನ್ನು ಸುಟ್ಟು ಹಾಕಲಾಗುವುದು ಅಥವಾ ಸ್ಫೋಟಿಸಲಾಗುವುದು. ನಾವು ಮನಸ್ಸು ಮಾಡಿದರೆ ಕೇವಲ ನಾಲ್ಕು ಗಂಟೆಗಳಲ್ಲಿ ಇರಾನ್ ದೇಶವನ್ನೇ ಸಂಪೂರ್ಣವಾಗಿ ನಾಶಪಡಿಸಬಹುದು.”

ಇರಾನ್ ತಿರುಗೇಟು : ‘ಸೋಲಿನ ಭಯದಿಂದ ಟ್ರಂಪ್ ಹತಾಶೆ’

ಟ್ರಂಪ್ ಅವರ ಈ ಬೆದರಿಕೆಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. IRGC ವಕ್ತಾರ ಇಬ್ರಾಹಿಂ ಜುಲ್ಫಿಕಾರಿ ಮಾತನಾಡಿ, ಟ್ರಂಪ್ ಹೇಳಿಕೆಗಳು ಆಧಾರರಹಿತ ಮತ್ತು ಅಹಂಕಾರದಿಂದ ಕೂಡಿದೆ ಎಂದು ಲೇವಡಿ ಮಾಡಿದ್ದಾರೆ.

ಸೋಲಿನ ಮುಚ್ಚಿಡುವ ಯತ್ನ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಅನುಭವಿಸುತ್ತಿರುವ ಸೈನಿಕ ಹಿನ್ನಡೆ ಮತ್ತು ಸೋಲನ್ನು ಮರೆಮಾಚಲು ಟ್ರಂಪ್ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಾರ್ಯಾಚರಣೆ ನಿಲ್ಲದು: ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಇರಾನ್‌ನ ಆಕ್ರಮಣಕಾರಿ ಕಾರ್ಯಾಚರಣೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಜುಲ್ಫಿಕಾರಿ ಎಚ್ಚರಿಸಿದ್ದಾರೆ.

ಸುಪ್ರೀಂ ಲೀಡರ್ ಮುಜ್ತಬಾ ಖಮೇನಿ ಪ್ರತಿಕ್ರಿಯೆ

ಇರಾನ್‌ನ ಸುಪ್ರೀಂ ಲೀಡರ್ ಮುಜ್ತಬಾ ಖಮೇನಿ ಟೆಲಿಗ್ರಾಮ್ ಮೂಲಕ ಪ್ರತಿಕ್ರಿಯಿಸಿ, “ಇರಾನ್ ಮೇಲೆ ದಾಳಿ ಮಾಡುವ ಅಥವಾ ಸೇನೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಹತ್ಯೆ ಅಥವಾ ಅಪರಾಧ ಕೃತ್ಯಗಳ ಮೂಲಕ ಇರಾನ್‌ನ ಮಿಲಿಟರಿ ಕಾರ್ಯಾಚರಣೆಯನ್ನು ತಡೆಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ, ಟ್ರಂಪ್ ನೀಡಿರುವ ಗಡುವು ಮುಕ್ತಾಯಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವುದರಿಂದ, ಇಡೀ ವಿಶ್ವದ ಕಣ್ಣು ಈಗ ಇರಾನ್ ಮತ್ತು ಅಮೆರಿಕದ ಮೇಲಿದೆ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಲಿದೆಯೇ ಎಂಬ ಆತಂಕ ಮನೆಮಾಡಿದೆ. (ಏಜೆನ್ಸೀಸ್)

RELATED ARTICLES
- Advertisment -
Google search engine

Most Popular