ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಪಿಎಲ್ ಡಿ ಬ್ಯಾಂಕ್ ಸ್ವಾಧೀನದಲ್ಲಿರುವ ರೈತ ಸಮುದಾಯ ಭವನ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದೆ ಎಂದು ಬಡಕನಕೊಪ್ಪಲು ಜೆ.ಮಂಜುನಾಥ್ ಮತ್ತು ಮಧುವನಹಳ್ಳಿ ಯೋಗೀಶ್ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರುಗಳು ಬ್ಯಾಂಕಿನ ಆಡಳಿತ ಮಂಡಳಿಯವರ ಕುಮ್ಮಕ್ಕಿನಿಂದ ಈ ಅಕ್ರಮ ನಡೆದಿದ್ದು ಕೂಡಲೇ ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹ ಮಾಡಿದರಲ್ಲದೆ ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.
ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಂದನ್ ಕುಮಾರ್ ಮತ್ತು ಯೋಗೀಶ್ ಅವರುಗಳು ನಿಯಮಾನುಸಾರ ಅರ್ಜಿ ಸಲ್ಲಿಸಿ ರೈತ ಸಮುದಾಯ ಭವನವನ್ನು ಗುತ್ತಿಗೆಗೆ ಪಡೆಯಲು ಸಿದ್ದರಿದ್ದರು ಕೆಲ ನಿರ್ದೇಶಕರುಗಳು ಒಳ ಒಪ್ಪಂದ ಮಾಡಿಕೊಂಡು ಬ್ತಾಂಕಿನ ಆದಾಯಕ್ಕೆ ಅಡ್ಡಗಲು ಹಾಕಿದ್ದಾರೆ ಎಂದು ಜೆ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಮಗಾಗಿರುವ ಅನ್ಯಾಯದ ಬಗ್ಗೆ ಆಡಳಿತ ಮಂಡಳಿಯವರು ಮತ್ತು ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಇದರ ಜತೆಗೆ ಟೆಂಡರ್ ನಡೆಸುವಾಗ ಸರ್ಕಾರ ಮತ್ತು ಸಹಕಾರದ ನಿಯಮವನ್ನು ಗಾಳಿಗೆ ತೂರಿರುವ ಆಡಳಿತ ಮಂಡಳಿಯವರು ತಮಗಿಷ್ಟ ಬಂದಂತೆ ನಡೆದುಕೊಂಡಿದ್ದು ಇವರ ಶ್ವೇಚ್ಚಾಚಾರದ ಆಡಳಿತವನ್ನು ಹೇಳುವವರು ಕೇಳುವವರೇ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ನಿಯಮಾನುಸಾರ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಮರುಟೆಂಡರ್ ನಡೆಸದಿದ್ದರೆ ರೈತರೊಡಗೂಡಿ ಬ್ಯಾಂಕಿನ ಮುಂದೆ ಉಗ್ರ ಹೋರಾಟ ನಡೆಸುವುದರೊಂದಿಗೆ ಕಾನೂನಿನ ಮೊರೆ ಹೋಗುವುದಾಗಿ ಮಾಹಿತಿ ನೀಡಿದರು.
ಕೆಲವು ನಿರ್ದೇಶಕರು ತಮ್ಮ ಹೆಸರಿಗೆ ರೈತ ಸಮುದಾಯ ಭವನವನ್ನು ಟೆಂಡರ್ ಮೂಲಕ ಪಡೆದುಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ ಬೇರೋಬ್ಬರ ಹೆಸರಿನಲ್ಲಿ ಬೇನಾಮಿಯಾಗಿ ಗುತ್ತಿಗೆ ವಹಿಸಿಕೊಂಡು ಲಾಭಗಳಿಸುವ ದೂರಾಲೋಚನೆ ಮಾಡಿದ್ದು ಇದಕ್ಕೆ ಕ್ಷೇತ್ರದ ಶಾಸಕರು ತಡೆಯೊಡ್ಡಿ ಬ್ಯಾಂಕ್ ಮತ್ತು ರೈತರ ಗೌರವ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.