ಹೊಸದಿಲ್ಲಿ : ಕೇಂದ್ರ ಸರ್ಕಾರವನ್ನು ನರೇಂದ್ರ ಮೋದಿ – RSS ಸರ್ಕಾರ ಎಂದು ಲೇವಡಿ ಮಾಡಿರುವ ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಚುನಾವಣಾ ಆಯೋಗದ ವಿರುದ್ದ ದೆಹಲಿಯ ರಾಮಲೀಲಾ ಮೈದಾನದಲ್ಲಿ ’ವೋಟ್ ಚೋರ್ ಗದ್ದಿ ಚೋಡ್’ ಬೃಹತ್ ರ‍್ಯಾಲಿಯನ್ನು ನಡೆಸಿದ್ದಾರೆ.
ಈ ವೇಳೆ ಮತಗಳ್ಳತನದ ವಿರುದ್ದ ಸಹಿಸಂಗ್ರಹ ಅಭಿಯಾನ ನಡೆಸಿದ್ದ ಕಾಂಗ್ರೆಸ್, ಆರು ಕೋಟಿ ಸಹಿಯನ್ನು ಸಂಗ್ರಹಿಸಿದೆ. ಈ ವೇಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ಬಿಜೆಪಿಗೆ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಆದರೆ, ವೋಟ್ ಚೋರಿ ಅಭಿಯಾನದಲ್ಲಿ ಕಾಂಗ್ರೆಸ್, ’ಇಂಡಿಯಾ ಮೈತ್ರಿಕೂಟ’ದಲ್ಲಿ ಏಕಾಂಗಿ ಆಗುತ್ತಿದೆಯಾ ಎನ್ನುವ ಪ್ರಶ್ನೆ ಎದುರಾಗಿದ್ದು, ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದ ಚುನಾವಣಾ ಫಲಿತಾಂಶ ಹೊರಬಂದ ದಿನದಿಂದ ರಾಹುಲ್ ಗಾಂಧಿ, ವೋಟ್ ಚೋರಿ ಬಗ್ಗೆ ಆರೋಪಿಸುತ್ತಾ ಬರುತ್ತಿದ್ದಾರೆ. ವೋಟರ್ ಅಧಿಕಾರ್ ಯಾತ್ರಾ ಎಂದು ಬಿಹಾರದಲ್ಲಿ ಯಾತ್ರೆಯನ್ನು ನಡೆಸಿದ್ದ ವೇಳೆ, ಒಂದೆರಡು ನಾಯಕರು, ರಾಹುಲ್ ಪರವಾಗಿ ನಿಂತಿದ್ದರು.
ರಾಹುಲ್ ಗಾಂಧಿ ಆರೋಪಕ್ಕೆ ಮೈತ್ರಿಕೂಟದಲ್ಲಿ ಅಸಮಾಧಾನ :
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ, ರಾಹುಲ್ ಗಾಂಧಿ, ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿನ ಸೋಲಿನ ಬಗ್ಗೆ ಕಿಡಿಕಾರಿದ್ದರು. ಆದರೆ, ಇಂಡಿಯಾ ಮೈತ್ರಿಕೂಟದ ಪಾಲುದಾರ ಪಾರ್ಟಿಗಳಾದ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಪಾರ್ಟಿಗಳು ಗೆಲುವು ಸಾಧಿಸಿದ್ದ ಬಗ್ಗೆ ರಾಹುಲ್ ಗಾಂಧಿ ಚಕಾರವೆತ್ತಿರಲಿಲ್ಲ. ರಾಹುಲ್ ಗಾಂಧಿ ಆರೋಪಕ್ಕೆ ಅಂದೇ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದರು.
ಇನ್ನು ಇತರ ಪಾರ್ಟಿಗಳಾದ ಡಿಎಂಕೆ, ರಾಷ್ಟ್ರೀಯ ಜನತಾದಳ ಮುಂತಾದ ಪಾರ್ಟಿಗಳಿಂದ, ಕಾಂಗ್ರೆಸ್ಸಿಗೆ ಅಲ್ಲಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದರೂ, ಪೂರ್ಣ ಪ್ರಮಾಣದ ಸಹಕಾರ ಇವರಿಂದ ಸಿಗುತ್ತಿಲ್ಲ. ವೋಟ್ ಚೋರಿ ವಿರುದ್ದ ಕಾಂಗ್ರೆಸ್ ಆರೋಪಿಸುತ್ತಿದ್ದರೂ, ಸರ್ವೋಚ್ಚ ನ್ಯಾಯಾಲಯದಲ್ಲಿ ಯಾಕೆ ದೂರನ್ನು ಸಲ್ಲಿಸುತ್ತಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಮಾತು. ಹಾಗಾಗಿ, ಮೇಲ್ನೋಟಕ್ಕೆ ಕಾಂಗ್ರೆಸ್ ಈ ವಿಚಾರದಲ್ಲಿ ಏಕಾಂಗಿಯಾಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.



