Tuesday, May 20, 2025
Google search engine

Homeರಾಜ್ಯಪಿಓಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಈಶ್ವರ ಖಂಡ್ರೆ ಸೂಚನೆ

ಪಿಓಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ನೀರಿನಲ್ಲಿ ಕರಗದ ಪಿಓಪಿ ವಿಗ್ರಹಗಳು ಜಲ ಮೂಲಗಳಿಗೆ ಅಪಾಯಕಾರಿಯಾಗಿದ್ದು, ಇಂತಹ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ಕಚೇರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಇಂತಹ ತಯಾರಕರಿಗೆ ಮಂಡಳಿ ನೋಟಿಸ್ ನೀಡಿದ್ದಾಗ್ಯೂ ಅವರು ಮತ್ತೆ ತಯಾರಿಕೆಯಲ್ಲಿ ತೊಡಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಸೂಚನೆ ನೀಡಿದರು.

ಪ್ರಕೃತಿ ಮತ್ತು ಪರಿಸರ ಉಳಿಸಬೇಕಾದ್ದು ನಮ್ಮೆಲ್ಲರ ಹೊಣೆಯಾಗಿದ್ದು, ಜಲ ಮೂಲಗಳಿಗೆ ಹಾನಿಯುಂಟು ಮಾಡುವ ಭಾರ ಲೋಹ ಮತ್ತು ರಾಸಾಯನಿಕ ಬಣ್ಣ ಲೇಪಿತ ಪಿಓಪಿ ವಿಗ್ರಹಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ವಿಸರ್ಜನೆಯನ್ನು ತಡೆಯಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2020ರ ಮೇ 12ರಂದು ಮಾರ್ಗಸೂಚಿ  ಹೊರಡಿಸಿದ್ದು, ಅದಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ದಿನಾಂಕ 21.08.2023ರಂದು ಸುತ್ತೋಲೆ ಹೊರಡಿಸಿ ಪಿ.ಓ.ಪಿ. ಮತ್ತು ಭಾರ ಲೋಹ ಮಿಶ್ರಿತ ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳ ತಯಾರಿಕೆ, ಮಾರಾಟ, ಸಾಗಾಟ ಮತ್ತು ವಿಸರ್ಜನೆಯನ್ನು ನಿಷೇಧಿಸಿದೆ. ಈಗ ಇದರ ಕಟ್ಟುನಿಟ್ಟಿನ ಪಾಲನೆ ಆಗಬೇಕು ಎಂದು ಹೇಳಿದರು.

ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ: ಜಲ ಕಾಯಿದೆ, ವಾಯು ಕಾಯಿದೆ ಮತ್ತು ಪರಿಸರ ಸಂರಕ್ಷಣಾ ಕಾಯಿದೆ 1986ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದ ಈಶ್ವರ ಖಂಡ್ರೆ, ಮಂಡಳಿಯ ನೋಟಿಸ್ ಗೂ ಹೆದರದೆ, ಬೀಗಮುದ್ರೆ ಹಾಕಿದ್ದರೂ, ಹಿಂಬಾಗಿಲಿನಿಂದ ಪಿಓಪಿ ಗಣೇಶ ತಯಾರಿಕೆ, ಸಾಗಣೆ, ದಾಸ್ತಾನು ಮತ್ತು ಮಾರಾಟದಲ್ಲಿ ತೊಡಗಿರುವ ತಯಾರಕರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸ್ಪಷ್ಟ ಸೂಚನೆ ನೀಡಿದರು.

ವಿಷಕಾರಿ: ಪಿಓಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಕೆರೆ, ಕಟ್ಟೆ, ನದಿ, ತೊರೆ, ಬಾವಿಗಳಲ್ಲಿ ವಿಸರ್ಜನೆ ಮಾಡಿದರೆ, ನೀರಿನಲ್ಲಿ ಸೀಸ, ನಿಕ್ಕಲ್, ಕ್ರೋಮಿಯಂನಂತಹ ಭಾರ ಲೋಹಗಳು ಕರಗುತ್ತವೆ. ಜೊತೆಗೆ ಪಿಓಪಿ ಕರಗದೆ ಹಾಗೇ ಉಳಿದು ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಈ ನೀರು ಕುಡಿಯುವ ಜಾನುವಾರುಗಳು ಸಾವಿಗೀಡಾಗುತ್ತವೆ. ಜನರೂ ಕಾಯಿಲೆ ಬೀಳುತ್ತಾರೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸಮುದಾಯ ಆರೋಗ್ಯ ರಕ್ಷಣೆಗೆ ಪಿಓಪಿ ಗಣೇಶ ಮಾರಾಟ, ತಯಾರಿಕೆ, ವಿಸರ್ಜನೆ ನಿಷೇಧಿಸುವುದು ಅನಿವಾರ್ಯ ಎಂದು ಹೇಳಿದರು.

ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯಾದ್ಯಂತ ಪಿಓಪಿ ಗಣೇಶ ಮಾರಾಟ ನಿರ್ಬಂಧಿಸುವಂತೆ ಆದೇಶ ನೀಡಿದರು.

ಪರಿಸರ ಸ್ನೇಹಿ ಗಣಪನ ಪೂಜಿಸಿ, ಇತರರನ್ನೂ ಪ್ರೇರೇಪಿಸಿ:

ಜಲಚರಗಳ ಸಾವಿಗೆ ಕಾರಣವಾಗುವ, ಕೆರೆ, ಕಟ್ಟೆ, ಬಾವಿಯ ನೀರನ್ನು ಕಲುಷಿತಗೊಳಿಸುವ ಪಿಓಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸುವಂತೆ ಹಾಗೂ ಇತರರನ್ನೂ ಪರಿಸರ ಸ್ನೇಹಿ ಗಣಪನ ಪೂಜಿಸುವಂತೆ ಪ್ರೇರೇಪಿಸುವಂತೆ ಸಚಿವ ಈಶ್ವರ ಬಿ ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.

ಗಣಪತಿ ಪರಿಸರದಿಂದ ಉದ್ಭವಿಸಿದ ದೇವರು, ನಾವು ಪರಿಸರ ಸ್ನೇಹಿ ಗಣಪನ ಪೂಜಿಸಿದರೆ ಅದು ನಿಜ ಭಕ್ತಿಯ ಸಮರ್ಪಣೆ ಆಗುತ್ತದೆ ಎಂದು ತಿಳಿಸಿರುವ ಅವರು, ಜೇಡಿ ಮಣ್ಣಿನಿಂದ ಅಥವಾ ಗೋಮಯದಿಂದ ತಯಾರಿಸಿದ ಗಣಪತಿಯ ಮೂರ್ತಿಗಳನ್ನು ಪೂಜಿಸಿ, ಮನೆಯಲ್ಲೇ ವಿಸರ್ಜಿಸಿ ಆ ನೀರನ್ನು ಗಿಡ, ಮರಗಳಿಗೆ ಹಾಕುವ ಮೂಕ ಪ್ರಕೃತಿ ಪರಿಸರ ಉಳಿಸುವಂತೆ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ನಾವು ಪರಿಸರಕ್ಕೆ ಮಾರಕವಾದಂತಹ ಬಣ್ಣ ಲೇಪಿತ ಹಾಗು ಪ್ಲಾಸ್ಟರ್ ಆಫ್ ಪ್ಯಾರಿಸ್ – ಪಿ.ಓ.ಪಿ.ಯಿಂದ ತಯಾರಿಸಿದ ಮೂರ್ತಿಗಳನ್ನು ಕೆರೆ, ಬಾವಿ, ನದಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ  ವಿಸರ್ಜಿಸುದಿಲ್ಲ ಎಂದು ಪ್ರತಿಜ್ಞೆ ಮಾಡೋಣ.  ನಮ್ಮ ಪರಿಸರವನ್ನು ಸಂರಕ್ಷಿಸೋಣ” ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡೊಣ ಎಂಬ ಸಂಕಲ್ಪ ಮಾಡೋಣ ಎಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular