ನವದೆಹಲಿ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತ ಭೇಟಿಯನ್ನು ಮತ್ತೊಮ್ಮೆ ಮುಂದೂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು ಎನ್ನಲಾಗಿದೆ. ಎರಡು ವಾರಗಳ ಹಿಂದೆ ನವದೆಹಲಿಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಕಾರಣಗಳಿಂದಾಗಿ ಈ ಭೇಟಿ ವಿಳಂಬವಾಯಿತು. ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು. ಘಟನೆ ಸಂಬಂಧ ಇಸ್ರೇಲ್ ಮಾಧ್ಯಮಗಳು ಸಹ ವರದಿ ಮಾಡಿವೆ.
2018 ರಲ್ಲಿ ಕೊನೆಯ ಬಾರಿಗೆ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದ್ದರು. ಭದ್ರತಾ ಕಾರಣಗಳಿಗಾಗಿ ಭಾರತ ಭೇಟಿ ಮುಂದೂಡಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ವರದಿಯಾಗಿದೆ. ಈ ವರ್ಷದ ಅಂತ್ಯದ ಮೊದಲು ನೆತನ್ಯಾಹು ಭಾರತಕ್ಕೆ ಭೇಟಿ ನೀಡುವ ಯೋಜನೆ ಹೊಂದಿದ್ದಾರೆಂದು ವರದಿಯಾಗಿತ್ತು.
ಈ ವರ್ಷ ಇಸ್ರೇಲಿ ನಾಯಕ ಭಾರತಕ್ಕೆ ತಮ್ಮ ಯೋಜಿತ ಭೇಟಿಯನ್ನು ರದ್ದುಗೊಳಿಸುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು, ನೆತನ್ಯಾಹು ಸೆ.9 ರಂದು ಭಾರತಕ್ಕೆ ಒಂದು ದಿನದ ಭೇಟಿಯನ್ನು ರದ್ದುಗೊಳಿಸಿದ್ದರು. ಏಪ್ರಿಲ್ ಚುನಾವಣೆಗೆ ಮುನ್ನ ಕೂಡ ಭೇಟಿ ರದ್ದುಗೊಳಿಸಿದ್ದರು.



