Tuesday, July 14, 2026
Google search engine

Homeರಾಜ್ಯತಿರುಮಲ ಮೊದಲ ಆರತಿ ವಿಚಾರ : ಡಿಕೆಶಿ ಪ್ರಸ್ತಾವಕ್ಕೆ ಟಿಟಿಡಿ ವಿರೋಧ, ರಾಜಕೀಯ ಚರ್ಚೆಗೆ ಗ್ರಾಸ

ತಿರುಮಲ ಮೊದಲ ಆರತಿ ವಿಚಾರ : ಡಿಕೆಶಿ ಪ್ರಸ್ತಾವಕ್ಕೆ ಟಿಟಿಡಿ ವಿರೋಧ, ರಾಜಕೀಯ ಚರ್ಚೆಗೆ ಗ್ರಾಸ

ಬೆಂಗಳೂರು/ತಿರುಪತಿ : ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕರ್ನಾಟಕದ ಸಚಿವರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಪ್ರತಿದಿನ ನಡೆಯುವ ಮೊದಲ ಆರತಿಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಸ್ತಾವಕ್ಕೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ವಿರೋಧ ವ್ಯಕ್ತಪಡಿಸಿದೆ.

ಟಿಟಿಡಿ ಟ್ರಸ್ಟ್ ಸದಸ್ಯ ಜಿ.ಭಾನುಪ್ರಕಾಶ್ ರೆಡ್ಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ತಿರುಪತಿ ದೇವಾಲಯವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಬೇಡಿ. ಇದು ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ತಿರುಮಲದಲ್ಲಿ ಪ್ರತಿದಿನ ಬೆಳಿಗ್ಗೆ ನಡೆಯುವ ‘ತಿರುಮಲ ನಿತ್ಯ ಆರತಿ’ ಶ್ರೀ ವೆಂಕಟೇಶ್ವರ ಸ್ವಾಮಿಗೆ ಗರ್ಭಗುಡಿಯಲ್ಲಿ ಸಲ್ಲಿಸುವ ವಿಶೇಷ ಪೂಜೆಯಾಗಿದ್ದು, ಈ ವೇಳೆ ಮಠಾಧೀಶರು, ಮುಖ್ಯ ಅರ್ಚಕರು, ವಿಶೇಷ ಅಧಿಕಾರಿಗಳು ಹಾಗೂ ಐತಿಹಾಸಿಕ ಪರಂಪರೆಯ ಭಾಗವಾಗಿ ಮೈಸೂರು ಮಹಾರಾಜರ ಪ್ರತಿನಿಧಿಯೊಬ್ಬರು ಮಾತ್ರ ಭಾಗವಹಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕರ್ನಾಟಕದ ಸಚಿವರು, ಶಾಸಕರು, ನ್ಯಾಯಮೂರ್ತಿಗಳು ಹಾಗೂ ಹಿರಿಯ ಅಧಿಕಾರಿಗಳು ತಿರುಪತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆ ಆದೇಶ ನೀಡುವುದಾಗಿ ತಿಳಿಸಿದ್ದರು.

ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಭಾನುಪ್ರಕಾಶ್ ರೆಡ್ಡಿ, ಮೊದಲ ಆರತಿಯಲ್ಲಿ ಭಾಗವಹಿಸುವ ವಿಶೇಷ ಹಕ್ಕು ಮೈಸೂರು ಮಹಾರಾಜರಿಗೆ ನೀಡಲಾಗಿತ್ತು. ಅದು ಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರಿಗಾಗಿ ನೀಡಿದ ಹಕ್ಕಲ್ಲ. ಹೊಸ ನಿಯಮವನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು, ಕರ್ನಾಟಕದ ಬೇಡಿಕೆಯನ್ನು ಒಪ್ಪಿಕೊಂಡರೆ ಇತರ ರಾಜ್ಯಗಳಿಂದಲೂ ಇದೇ ರೀತಿಯ ಬೇಡಿಕೆಗಳು ಬರಬಹುದು. ಹೀಗಾಗಿ ಈ ವಿಚಾರದ ಕುರಿತು ವಿರೋಧದ ನಿರ್ಣಯವನ್ನು ಟಿಟಿಡಿ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ತಿರುಪತಿಯಲ್ಲಿ ನಡೆಯುವ ಮೊದಲ ಆರತಿ ಐತಿಹಾಸಿಕವಾಗಿ ಕರ್ನಾಟಕದೊಂದಿಗೆ ಸಂಬಂಧ ಹೊಂದಿರುವ ವಿಶೇಷ ಹಕ್ಕಾಗಿದೆ. ಈವರೆಗೆ ಕರ್ನಾಟಕ ಸರ್ಕಾರದ ವಿಶೇಷ ಅಧಿಕಾರಿಯೊಬ್ಬರು ಭಾಗವಹಿಸುತ್ತಿದ್ದರು. ಇನ್ನು ಮುಂದೆ ರಾಜ್ಯದ ಪರವಾಗಿ ಭೇಟಿ ನೀಡುವ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ನ್ಯಾಯಮೂರ್ತಿಗಳು ಹಾಗೂ ಗಣ್ಯರಿಗೂ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.

ತಿರುಪತಿಗೆ ಭೇಟಿ ನೀಡುವ ಹಲವು ಜನಪ್ರತಿನಿಧಿಗಳು ದರ್ಶನ ಪಡೆಯದೇ ಹಿಂದಿರುಗುವ ಪರಿಸ್ಥಿತಿ ಎದುರಾಗುತ್ತಿತ್ತು. ರಾಜ್ಯದ ಪರವಾಗಿ ಸೇವೆ ಸಲ್ಲಿಸುವವರಿಗೆ ದೇವರ ಸನ್ನಿಧಿಯಲ್ಲಿ ಮೊದಲ ಆರತಿ ಸ್ವೀಕರಿಸುವ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದ್ದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಲಾಗಿತ್ತು ಹಾಗೂ ಮೈಸೂರು ಮಹಾರಾಜರ ಕಾಲದಲ್ಲೇ ಕರ್ನಾಟಕಕ್ಕೆ ಸುಮಾರು ಏಳು ಎಕರೆ ಜಾಗ ಮಂಜೂರಾಗಿತ್ತು ಎಂದು ಅವರು ಸ್ಮರಿಸಿದ್ದರು. ಮುಖ್ಯಮಂತ್ರಿಯವರ ಪ್ರಸ್ತಾವ ಇದೀಗ ಧಾರ್ಮಿಕ ಹಾಗೂ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಟಿಟಿಡಿ ಮಂಡಳಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದತ್ತ ಗಮನ ಹರಿಸಲಾಗಿದೆ.

RELATED ARTICLES
- Advertisment -
Google search engine

Most Popular