ಕೊಳ್ಳೇಗಾಲ : ಪ್ರತಿಯೊಂದು ಮನೆಯಲ್ಲೂ ಸಹ ಗ್ರಂಥಾಲಯಗಳು ನಿರ್ಮಾಣವಾಗಬೇಕು ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಮಾನಸ ಹೇಳಿದರು.
ನಗರದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯಗಳನ್ನು ನಿರ್ಮಾಣ ಮಾಡಿದರೆ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪ್ರತಿನಿತ್ಯ ಪುಸ್ತಕದ ಜೊತೆ ಕಾಲ ಕಳೆಯಬೇಕು. ಎಂದರಲ್ಲದೆ, ಮನೆಯೆಂದರೆ ದೇವರ ಮನೆ, ಮಲಗುವಕೋಣೆ, ಅಡುಗೆ ಮನೆ, ವರಾಂಡ, ಬಚ್ಚಲುಮನೆ ಇವೆಲ್ಲವೂ ಅನಿವಾರ್ಯ ಅಂದುಕೊಂಡು ಕಟ್ಟುವ ನಾವು, ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಪುಸ್ತಕ ಸಂಗ್ರಹಿಸಿಡುವ ಗ್ರಂಥಾಲಯ ಅನಿವಾರ್ಯ ಅಂತ ನಮಗೆ ಅನಿಸಲೇ ಇಲ್ಲ. ಅದು ಕೇವಲ ಸಾಹಿತಿಗಳ, ಕವಿಗಳ, ವಿಮರ್ಶಕರ ಮನೆಗೆ ಮಾತ್ರ ಸೀಮಿತವಾಗುತಿತ್ತು.
ಈಗ ಅದು ಸಾರ್ವತ್ರಿಕಗೊಳ್ಳುವ ಅನಿವಾರ್ಯತೆ ಕಂಡುಬರುತ್ತಿದ್ದು, ಮೊದಲು ಮೊಬೈಲ್ ಬಿಡಿ ಪುಸ್ತಕ ಹಿಡಿಯಿರಿ ಎಂಬ ಆಶಯಕ್ಕೆ ಕರ್ನಾಟಕ ಸರ್ಕಾರ ಒತ್ತು ನೀಡಿದೆ. ಹಾಗಾಗಿ ಮನೆಗೊಂದು ಗ್ರಂಥಾಲಯ ಎಂಬ ಅಭಿಯಾನವನ್ನು ನಡೆಸುತ್ತಿದ್ದೇವೆ. ಕೊಳ್ಳೇಗಾಲದ ಪಳನಿಸ್ವಾಮಿ ಜಾಗೇರಿ ಇವರ ಮನೆಯಿಂದ ಪ್ರಾರಂಭಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿದರೆ ಪ್ರಾಧಿಕಾರದಿಂದ ಅಭಿನಂದಿಸಿ ಅಭಿನಂದನ ಪತ್ರ ನೀಡಲಾಗುವುದು ಎಂದರು.
ಬಳಿಕ ಸಾಹಿತಿ ಮಹದೇವ ಶಂಕನಪುರ ಮಾತನಾಡಿ, ಪುಸ್ತಕ ಸಂಸ್ಕೃತಿ ಉಳಿಸುವುದು ನಮ್ಮ ಕರ್ತವ್ಯ ಆಗಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ 5 ಸಾವಿರ ಪುಸ್ತಕ ಹೊಂದಿದ್ದು ಅವುಗಳನ್ನು ಓದುತ್ತಿದ್ದರು. ಹಾಗಾಗಿ ಅವರ ಜ್ಞಾನ ಸಂವಿಧಾನ ಎಂಬ ದೊಡ್ಡಗ್ರಂಥ ಬರೆಯುವಲ್ಲಿ ಸಾಧ್ಯವಾಯಿತು. ಮಕ್ಕಳು ಪುಸ್ತಕ ಹಿಡಿಯುವ ಕಾಲಕ್ಕೆ ಮನೆ, ಸಮಾಜ, ಶಾಂತಿ, ನೆಮ್ಮದಿ ಹೊಂದಲು ಸಾಧ್ಯ. ಮಕ್ಕಳಿಗೆ ಪುಸ್ತಕ ಹಿಡಿ ಎನ್ನವ ಹಿರಿಯರು ಮೊದಲು ಪುಸ್ತಕ ಹಿಡಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊ.ದೊಡ್ಡಲಿಂಗೇಗೌಡ, ಜನಪರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಚಿಕ್ಕಲ್ಲೂರು, ಗುರುಸ್ವಾಮಿ, ಬಸಳಗುಣಸೆ ಮಂಜುನಾಥ್, ಮದ್ದೂರು ದೊರೆಸ್ವಾಮಿ, ಬ್ರಹ್ಮಲಿಂಗಯ್ಯ, ಶಾಂತರಾಜ್, ಗೋಪಾಲ್ ಸ್ವಾಮಿ ಬಸವರಾಜು, ಕವಿಗಳು ಇದ್ದರು.



