ರಾಮನಗರ: ಮಾನವ ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು ಮತ್ತು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ನಿಂಗಪ್ಪ ಪರುಶುರಾಮ ಕೋಪರ್ಡೆ ರವರು ತಿಳಿಸಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಮನಗರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ವಕೀಲರ ಸಂಘ ರಾಮನಗರ ಹಾಗೂ ಜಿಲ್ಲೆಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಸಭೆಯನ್ನು ಉದ್ಫಾಟಿಸಿ ಮಾತನಾಡಿದರು. ಮಾನವ ಹಕ್ಕುಗಳ ಹೋರಾಟ ನಿನ್ನೆ ಮೊನ್ನೆಯದಲ್ಲ ಅದು ಮಾನವ ಹುಟ್ಟಿನಿಂದಲು ಬಂದಿದೆ ಶಿಲಾಯುಗದಲ್ಲಿ ಮನುಷ್ಯ ನಿಸರ್ಗವನ್ನು ಅವಲಂಬಿಸಿದ್ದ ನಂತರ ಪ್ರಾಣಿ ಪಕ್ಷಿಗಳನ್ನು ಕೊಂದು ಹಸಿ ಮಾಂಸ ತಿನ್ನುತ್ತಿದ್ದ ಮುಂದೆ ಕಾಡು ಜನರೊಂದಿಗೆ ಹೋರಾಟ ಮಾಡಿಕೊಂಡು ಬಂದ , ಥಾಮಸ್ ಆಕ್ಸ್ ಎಂಬ ಲೇಖಕ ಅಂದು ಅವರು ಹಸಿವನ್ನು ನೀಗಿಸಿಕೊಳ್ಳಲು ಆಹಾರಕ್ಕಾಗಿ ಹೋರಾಟ ಮಾಡುತ್ತಿದ್ದರು ಎಂದು ತಮ್ಮ ಲೇಖನಗಳಲ್ಲಿ ತಿಳಿಸಿದ್ದಾರೆ. ನಂತರ ಜನಸಂಖ್ಯೆ ಹೆಚ್ಚಾದ ನಂತರ ನನ್ನದು ತನ್ನದು ಎಂಬ ಮನೋಭಾವ ಅವರಲ್ಲಿ ಬಂದು ಹೋರಾಟ ಮಾಡುತ್ತಿದ್ದರು ಎಂದರು.
ಮುಂದೆ ಮಾನವ ತನ್ನ ಆಹಾರ ಮತ್ತು ಆಸ್ತಿಗಾಗಿ ನಾಯಕನನ್ನು ನೇಮಕ ಮಾಡಿಕೊಂಡು ಹೋರಾಟ ಮಾಡತೊಡಗಿದ, ಚಕ್ರ ಮತ್ತು ಬೆಂಕಿ ಸಂಶೋಧನೆಯಾದ ನಂತರ ಮಡಿಕೆಗಳನ್ನು ತಯಾರಿಸಲು ಮತ್ತು ಆಹಾರ ಪದಾರ್ಥಗಳನ್ನು ಬೇಯಿಸಿ ತಿನ್ನಲು ಆರಂಭಿಸುತ್ತಾರೆ. ಮಾನವ ಹಸಿ ಮಾಂಸದಿಂದ ಬೇಯಿಸಿ ತಿನ್ನುವ ಕಡೆ ಬದಲಾಗತೊಡಗಿದನು ಎಂದರು. ಅರಿಸ್ಟಾಟಲ್ ರಾಜ, ಪ್ರಜೆಗಳನ್ನು ಪೋಷಣೆ ಪಾಲನೆ ಮಾಡುವುದು ರಾಜನ ಕರ್ತವ್ಯವೆಂದು ತಿಳಿಸಿದ್ದಾನೆ ೧೨ ನೇ ಶತಮಾನದ ಹುಲಿಗೇರೆ ಸೋಮನಾಥ ಎಂಬ ಲೇಖಕನು ರಾಜ, ಮಂತ್ರಿ ಸೈನಿಕನ ಧರ್ಮದ ಬಗ್ಗೆ, ಒಬ್ಬ ರಾಜನು ಪ್ರಜೆಗಳನ್ನು ಯಾವ ರೀತಿ ಪೋಷಣೆ ಮಾಡಬೇಕು ಎಂದು ತಿಳಿಸಿದ್ದಾರೆ ಎಂದರು.
ಭಾರತದ ಸಂವಿಧಾನ ಪ್ರತಿಯೊಬ್ಬ ಮಾನವನಿಗೆ ನೈಸರ್ಗಿಕವಾಗಿ ಬಂದಂತಹ ಮತ್ತು ಪರಭಾರೆಯಾಗದಂತಹ ಹಕ್ಕುಗಳನ್ನು ನೀಡಿದೆ ಅದರಲ್ಲಿ ಪ್ರಮುಖವಾಗಿ ಜೀವಿಸುವ ಹಕ್ಕು , ಸಮಾನತೆಯ ಹಕ್ಕು , ವೈಯಕ್ತಿಕ ಸ್ವಾತಂತ್ರ್ಯ ಹಕ್ಕು , ಧಾರ್ಮಿಕ ಹಕ್ಕು, ಶೋಷಣೆಯ ವಿರುದ್ಧ ಹಕ್ಕು ಅನೇಕ ಹಕ್ಕುಗಳನ್ನು ನೀಡಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ನ್ಯಾ.ಅನಿತಾ ಎನ್.ಪಿ ರವರು ನಮ್ಮ ಭಾರತದ ಸಂವಿಧಾನದಲ್ಲಿ ಸ್ಥಾಪಿತವಾಗಿರುವಂತಹ ಹಾಗೂ ಅಂತರ ರಾಷ್ಟ್ರೀಯ ಒಪ್ಪಂದಗಳಲ್ಲಿ ಸೇರಿಸಲಾಗಿರುವಂತಹ ಮಾನವ ಹಕ್ಕುಗಳು ಎಂದು ಬಂದಾಗ ಜೀವನದ ಸ್ವಾತಂತ್ರ್ಯದ ಸಮಾನತೆಯ ವ್ಯಕ್ತಿಯ ಘನತೆಯ ಹಕ್ಕುಗಳೆ ಮಾನವ ಹಕ್ಕುಗಳು ಎಲ್ಲಾ ಮಾನವರು ಸಮಾನರು, ಪ್ರತಿಯೊಬ್ಬರು ತಾರತಮ್ಮ ಇಲ್ಲದ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಹೊಂದುವ ಕಾನೂನು ಬದ್ದ ಹಕ್ಕನ್ನು ಹೊಂದಿರುತ್ತಾರೆ.

ಪ್ರತಿಯೊಬ್ಬ ಮಾನವನಿಗೆ ನೈಸರ್ಗಿಕವಾಗಿ ಬಂದಂತಹ ಮತ್ತು ಪರಭಾರೆಯಾಗದಂತಹ ಹಕ್ಕುಗಳು ಬಗ್ಗೆ ವಿವರಿಸಿದರು. ಮಾನವ ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು, ಹಕ್ಕುಗಳ ಉಲ್ಲಂಘನೆ ಆಗದಂಗೆ ರಕ್ಷಣೆ ನೀಡುವುದು ಹಾಗೂ ಹಕ್ಕುಗಳ ಉಲ್ಲಂಘನೆಗೆ ಒಳಗೊಂಡವರಿಗೆ ನೆರವು ನೀಡುವುದು ನಮ್ಮ ಇವುಗಳು ಉಲ್ಲಂಘನೆಯಾದಲ್ಲಿ ನಾವು ನೀವುಗಳೆಲ್ಲ ಅದನ್ನು ತಡೆಯುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದರು.
ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಾಯಿತ್ರಿ ರವರು ಭೋಧಿಸಿದರು. ಮಾನವ ಹಕ್ಕುಗಳ ದಿನಾಚರಣೆಯ ಕುರಿತು ವಿಜಯ್ ಕುಮಾರ್ , ಸಿಎಲ್‌ಎಡಿಸಿ ಮತ್ತು ಲಕ್ಷ್ಮಿ ಪ್ರಸನ್ನ ರವರು ಉಪನ್ಯಾಸ ನೀಡಿದರು ಕಾರ್ಯಕ್ರಮವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ನಾಗವೇಣಿ ರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ , ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರಸನ್ನ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.