ಬೆಂಗಳೂರು : ಮಹಾತ್ಮಾ ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ ಬಿಜೆಪಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ರಾಜಭವನ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಹಕ್ಕು ಹಾಗೂ ಬಡವರ ಉದ್ಯೋಗಕ್ಕಾಗಿ ಹೋರಾಟ. ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಪಂಚ ಗಮನಿಸಿತ್ತು. ನರೇಗಾ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ ಮೆಚ್ಚುಗೆ ಸೂಚಿಸಿದ್ದು, ಉದ್ಯೋಗ ಖಾತ್ರಿಗಾಗಿ 6000 ಕೋಟಿ ಖರ್ಚು ಮಾಡಲಾಗುತ್ತಿತ್ತು. ಯಾವ ರೀತಿಯ ಉದ್ಯೋಗ ಎಂಬುವುದನ್ನು ಪಂಚಾಯತ್ ನಿರ್ಧಾರ ಮಾಡುತ್ತಿತ್ತು. ಸ್ವಂತ ಜಮೀನಿನಲ್ಲಿ ಉದ್ಯೋಗ ಮಾಡಿದರೂ ಕೂಲಿ ಕೊಡಲಾಗುತ್ತಿತ್ತು ಎಂದರು.
ಎರಡು ದಿನಗಳ ಕಾಲ ಸದನದಲ್ಲಿ ಮನರೇಗಾ ಕುರಿತು ಚರ್ಚೆ ಆಗಲಿದ್ದು, ಗಾಂಧೀಜಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುವ ಹಕ್ಕು ಇಲ್ಲ. ಕಚೇರಿಯಲ್ಲಿ ಫೋಟೋ ಇಡುವ ಹಕ್ಕು ಇಲ್ಲ. ಗಾಂಧೀಜಿಯನ್ನು ದ್ವೇಷದಿಂದ ಕಾಣಲಾಗುತ್ತಿದೆ.ಹೆಚ್.ಡಿ.ಕೆ, ಬಿಜೆಪಿ ಚರ್ಚೆಗೆ ಬರಲಿ ನಾನು ಸಿದ್ದ. ಹತ್ತು ವರ್ಷ ನಿಮ್ಮ ಸರ್ಕಾರ ಇದೆ. ಏನು ಮಾಡಿದ್ರೂ. ಒಂದಿಬ್ಬರು ತಪ್ಪು ಮಾಡಿದರೆ ಮೂಗು ಕೊಯ್ಯಲಾಗುತ್ತಾ? ಎಂದು ಪ್ರಶ್ನಿಸಿದರು.
ಗ್ರಾಮ ಪಂಚಾಯತಿಗಳಿಗೆ ಮಹಾತ್ಮಾ ಗಾಂಧಿ ಹೆಸರು ಇಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ದು ಅವರು ಇದು ಸಾಧ್ಯ ಇಲ್ಲ ಎಂದಿದ್ದಾರೆ. ಜಿ ರಾಮ್ ಜಿ ವಾಪಸ್ ಪಡೆಯಲು ಹೇಳಿದ್ದಾರೆ.
ಇನ್ನೂ ಮನರೇಗಾ ರದ್ದು ದೇಶಕ್ಕೆ ಮಾಡುತ್ತಿರುವ ದ್ರೋಹ. ಪೊಲೀಸರು ಬಂಧಿಸಿದರೂ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬಿಜೆಪಿ ಸರ್ಕಾರ ಬಡವರ, ಆದಿವಾಸಿಗಳ, ಹಿಂದುಳಿದವರ, ದಲಿತರ ಕೆಲಸ ಕಸಿದುಕೊಳ್ಳುತ್ತಿದೆ ಹಾಗೂ ಬಡವರ ಅನ್ನಕ್ಕೆ ಕನ್ನ ಹಾಕಿದೆ. ಮನರೇಗಾ ಯೋಜನೆಯಿಂದ ಹಳ್ಳಿಯ ಜನರಿಗೆ ಕೆಲಸ ಮಾಡುವ ಹಕ್ಕು ನೀಡಲಾಗಿತ್ತು, ಆದರೆ ಅದನ್ನು ಕಸಿದುಕೊಳ್ಳಲಾಗಿದೆ ಎಂದರು.
ಯೋಜನೆಗೆ 60% ಹಣ ಕೇಂದ್ರ ಸರ್ಕಾರ ನೀಡುತ್ತಿದೆ. 40% ಹಣ ರಾಜ್ಯ ಸರ್ಕಾರ ಭರಿಸಬೇಕಾಗಿದೆ. ರಾಜ್ಯ ಸರ್ಕಾರದಲ್ಲಿ ಹಣ ಎಲ್ಲಿದೆ? ರಾಜ್ಯಕ್ಕೆ ಧಕ್ಕಬೇಕಾದ ಹಣ ಕೇಂದ್ರದ ಕೈಯಲ್ಲಿದೆ. ಮನರೇಗಾದಲ್ಲಿ ಬಡ ಜನರು ಯಾವಾಗ ಬೇಕಾದರೂ ಕೆಲಸ ಪಡೆದುಕೊಳ್ಳಬಹುದಿತ್ತು. ಆದರೆ ಇದೀಗ ದೆಹಲಿಯಲ್ಲಿ ಕುಳಿತು ಇವೆಲ್ಲವನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಸಾಲಮನ್ನಾ ಮಾಡುತ್ತದೆ. ಆದರೆ ಮನರೇಗಾಕ್ಕೆ ಒಂದು ಲಕ್ಷ ಕೋಟಿ ಕೊಡಲು ಆಗುತ್ತಿಲ್ಲ. ಕರ್ನಾಟಕ ಮನರೇಗಾ ಯೋಜನೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ಅದಕ್ಕೆ ಬಿಜೆಪಿಗೆ ಸಹಿಸಲು ಆಗ್ತಿಲ್ಲ. ಹಾಗಾಗಿ ಅಧಿಕಾರ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.



