ಬೆಂಗಳೂರು: ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ (ಐ ಹ್ಯಾವ್ ಡನ್ ಎವೆರಿ ವರ್ಕ್ ಇನ್ ದ ಪಾರ್ಟಿ) ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಹಾಗೂ ಸದಾಶಿವನಗರದ ತಮ್ಮ ನಿವಾಸದ ಬಳಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.
ಇನ್ನೂ ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ್ದರ ಬಗ್ಗೆ ಕೇಳಿದಾಗ, ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ದೆಹಲಿಯಲ್ಲಿ ನಡೆಯುವ ಸಿಡಬ್ಲ್ಯೂಸಿ ಸಭೆಗೆ ತಾವು ತೆರಳುತ್ತಿರಾ ಎಂಬ ಪ್ರಶ್ನೆಗೆ ನನ್ನನ್ನು ಕರೆದರೆ ಖಂಡಿತಾ ಹೋಗುತ್ತೇನೆ. ಆದರೆ ಇದುವರೆಗೂ ಕರೆದಿಲ್ಲ ಎಂದರು. ಮುಖ್ಯಮಂತ್ರಿಯವರನ್ನು ಸಭೆಗೆ ಆಹ್ವಾನಿಸಲಾಗಿದೆಯಲ್ಲ ಎಂದು ಹೇಳಿದಾಗ, ಇರಬಹುದು, ಸಿಎಂಗೆ ಆಹ್ವಾನ ನೀಡಿದ್ದಾರೆ ಎಂದು ನನಗೂ ಗೊತ್ತಿದೆ. ಡೆಪ್ಯುಟಿ ಸಿಎಂಗೆ ಕರೆದಿಲ್ಲ ಎಂದು ತಿಳಿಸಿದರು ಪಿಸಿಸಿ ಅಧ್ಯಕ್ಷರಿಗೆ ಆಹ್ವಾನವಿಲ್ಲವೇ ಎಂದು ಕೇಳಿದಾಗ, ಸಮಿತಿಯ ವಿಸ್ತರಿತ ಸಭೆಗೆ ಕರೆಯುತ್ತಾರೆ ಎಂದರು.
ಒಂದೊಮ್ಮೆ ಸಭೆಗೆ ಕರೆದರೆ ಹೋಗುವಿರಾ ಎಂದು ಕೇಳಿದಾಗ, ಕರೆದರೆ ಹೋಗಬೇಕಾಗುತ್ತದೆ. ಕರೆದಾಗ ಹೋಗದೇ ಇರಲು ಆಗುತ್ತದೆಯೇ ಎಂದರಲ್ಲದೇ, ಖರ್ಗೆ ಅವರ ಜತೆ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಿದರಾ ಎಂಬುದಕ್ಕೆ, ಯಾವ ವಿಚಾರವಾಗಿಯೂ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ ಎಂದರು.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆಯೇ ಎಂದು ಕೇಳಿದಾಗ, ನೀವು ಹೇಳಿದ್ದಕ್ಕೆಲ್ಲಾ ಉತ್ತರ ನೀಡಲು ಆಗುವುದಿಲ್ಲ ನಾನು ಹೇಳುವುದನ್ನೂ ಕೇಳಿ ಎಂದರು.



