ಚಾಮರಾಜನಗರ : ಡಾ. ಬಾಬು ಜಗಜೀವನ್ ರಾಮ್ ರವರ ಜೀವನ ಹಾಗೂ ಸಾಧನೆಗಳ ಬಗ್ಗೆ ಅಪಾರ ಪುಸ್ತಕಗಳು ಪ್ರಕಟವಾಗಿದೆ. ಸಂಶೋಧನೆ ಹಾಗೂ ಹೊಸ ರಚನೆಗಳ ಮೂಲಕ ಅನೇಕ ವಿಶ್ವವಿದ್ಯಾಲಯಗಳು ಚಿಂತಕರು , ರಾಮ್ ರವರ ಕೊಡುಗೆಯನ್ನು ದಾಖಲಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್ ರಾಮ್ ರವರ ಜೀವನ ಮತ್ತು ಕೊಡುಗೆಗಳ ಕುರಿತು ಮಾತನಾಡುತ್ತಾ ಜಗಜೀವನ್ ರಾಮ್ ಆಧುನಿಕ ಭಾರತದ ನಿರ್ಮಾಣದಲ್ಲಿ ಒಬ್ಬರಾಗಿದ್ದಾರೆ.ದೇಶದ ಬಡತನ ಹಾಗೂ ಹಸಿವನ್ನು ನೀಗಿಸುವ ದಿಕ್ಕಿನಲೇ ಅವರ ಸಾಧನೆ ಮರೆಯಲಾಗದು.
ಕೃಷಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ ಹಸಿರು ಕ್ರಾಂತಿಯ ಮೂಲಕ ಕೃಷಿ ವಲಯಕ್ಕೆ ತಮ್ಮದೇ ಕೊಡುಗೆ ನೀಡುವ ಮೂಲಕ ಕೃಷಿ ಬದುಕನ್ನು ಜೀವಂತಗೊಳಿಸಿ, ಆಹಾರ ಉತ್ಪಾದನೆಗಳ ಮೂಲಕ ಕೋಟ್ಯಾಂತರ ಭಾರತೀಯರ ಬಡತನ ಹಾಗೂ ಹಸಿವನ್ನು ನೀಗಿಸಿದ ಮಹಾ ಶ್ರೇಷ್ಠ ಆಡಳಿತಗಾರರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕರಾದ ಡಾ. ಮದನ ಮೋಹನ ಮಾಳವಿಯರವರ ಪ್ರಭಾವಕೆ ಒಳಗಾದವರು. ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿ ಸತ್ಯಾಗ್ರಹ ಮತ್ತು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ ರಾಷ್ಟ್ರ ಭಕ್ತ. ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಗಮನಸೆಳೆದ ಜಗಜೀವನ್ ರಾಮ್ ರವರು ಬೋಸ್ ರವರ ಮೆಚ್ಚುಗೆಯ ವ್ಯಕ್ತಿಯಾಗಿದ್ದವರು.

ಭಾರತದ ಸ್ವಾತಂತ್ರ್ಯ ನಂತರ ಕೃಷಿ, ಕೈಗಾರಿಕೆ, ನೀರಾವರಿ, ರಕ್ಷಣೆ ಕಾರ್ಮಿಕ ಹಾಗೂ ಭಾರತದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ವಿಶ್ವ ದಾಖಲೆಯ ಸಂಸತ್ ಸದಸ್ಯತ್ವವನ್ನು ಹೊಂದಿದ ಪ್ರಮುಖರಲ್ಲಿ ಜಗಜೀವನ್ ರಾಮ್ ಮುಖ್ಯರು. ಭಾರತದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಜೀವನ ಸಾಧನೆ ಹಾಗೂ ಭಾರತದ ಅಭಿವೃದ್ಧಿಯಲ್ಲಿ ಜಗಜೀವನ್ ರಾಮ್ ರವರ ಕೊಡುಗೆಗಳ ಕುರಿತು ನಿರಂತರ ಸಂಶೋಧನೆಗಳು, ಚಿಂತನೆಗಳು ಮತ್ತು ಹೊಸ ದಿಕ್ಕಿನಲ್ಲಿ ಭಾರತದ ನಿರ್ಮಾಣದ ಕುರಿತು ಸಮಗ್ರ ಅಧ್ಯಯನ ನಡೆಯುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಮುಖಂಡರಾದ ಶಿವಲಿಂಗ ಮೂರ್ತಿರವರು ಮಾತನಾಡಿ ಬಾಬು ಜಗಜೀವನ್ ರಾಮ್ ರವರ ಕೊಡುಗೆಗಳ ಕುರಿತು ಕಳೆದ ಎರಡು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮವನ್ನು ರೂಪಿಸಿರುವ ಅಧ್ಯಕ್ಷರಾದ ಋಗ್ವೇದಿ ರವರಿಗೆ ಧನ್ಯವಾದಗಳು ಅರ್ಪಿಸುತ್ತೇವೆ. ಜಗಜೀವನ್ ರಾಮ್ ರವರು ಸಮಾನತೆ ಹರಿಕಾರರು .ಪ್ರಾಮಾಣಿಕತೆ, ಸರಳತೆ, ಹಾಗೂ ಪ್ರಭಾವಿ ವ್ಯಕ್ತಿಯಾಗಿ ಬೆಳೆದ ಜಗಜೀವನ್ ರಾಮ್ ರವರು ಇಡೀ ಭಾರತದ ಕೋಟ್ಯಾಂತರ ಭಾರತೀಯರ ಅಭಿವೃದ್ಧಿಗೆ ತಮ್ಮ ಪೂರ್ಣ ಜೀವನವನ್ನು ಅರ್ಪಿಸಿಕೊಂಡವರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ರವರು ಮಾತನಾಡಿ ಹಾಗೂ ಬಾಬು ಜಗಜೀವನ್ ರಾಮ್ ಕೃಷಿ ಹಾಗೂ ಕಾರ್ಮಿಕ ವಲಯದ ಸಚಿವರಾದಾಗ ಭಾರತ ಬಹಳ ಹಿಂದೆ ಉಳಿದಿತ್ತು ಆಹಾರಕ್ಕೆ ಪರದಾಡುವ ಪರಿಸ್ಥಿತಿ ಇತ್ತು .
ಅಂತಹ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ತಮ್ಮ ದೂರದೃಷ್ಟಿ ಹಾಗೂ ಜ್ಞಾನದ ಮೂಲಕ ಭಾರತದ ಪ್ರಗತಿಗೆ ಪ್ರಮುಖರಾದವರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್, ಮಾಜಿ ನಗರಸಭಾ ಸದಸ್ಯರಾದ ಪದ್ಮ ಪುರುಷೋತ್ತಮ್ ,ಸರಸ್ವತಿ ಬಿಕೆ ಆರಾಧ್ಯ , ಸುಬ್ಬಪ್ಪ ಮಹದೇವಪ್ಪ ಹಾಗೂ ರುದ್ರಪ್ಪ ಉಪಸ್ಥಿತರಿದ್ದರು.



