ಚಾಮರಾಜನಗರ : ದೇಶ ಮತ್ತು ಧರ್ಮಕ್ಕಾಗಿ ದುಡಿದವರನ್ನು ಸ್ಮರಿಸುವ ಮೂಲಕ ಗೌರವಿಸಿ ಅವರ ಇತಿಹಾಸವನ್ನು ಎಲ್ಲೆಡೆ ತಿಳಿಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್ ಜೈಹಿಂದ್ ಪ್ರತಿಷ್ಠಾನ ಅಮಚ ವಾಡಿ ಶ್ರೀ ಮಹದೇಶ್ವರ ಅರಳಿಕಟ್ಟೆ ಸಮೀಪ ಜೈಹಿಂದ್ ಅಭಿಯಾನ ಹಾಗೂ ವಿಶ್ವ ತರ್ಕ ದಿನ ಹಾಗೂ ಭಾರತೀಯರ ಕೊಡುಗೆಗಳನ್ನು ಬಗ್ಗೆ ಮಾತನಾಡಿ ಭಾರತದ ಧರ್ಮ ಮತ್ತು ಸಂಸ್ಕೃತಿ ಜೀವನ ಮೌಲ್ಯಗಳನ್ನು ಇಡೀ ಜಗತ್ತಿಗೆ ತಿಳಿಸಿ ವೇದಾಂತ ಭಾರತಿ ಹಾಗೂ ರಾಮಕೃಷ್ಣ ಆಶ್ರಮಗಳನ್ನು ಸ್ಥಾಪಿಸುವ ಮೂಲಕ ಸೇವೆ ಮತ್ತು ತ್ಯಾಗದ ಚಿಂತನೆಗಳನ್ನು ಸದಾಕಾಲ ಮುನ್ನಡೆಸುವ ಸ್ಪೂರ್ತಿ ಯನ್ನು ತುಂಬಿದವರು ಸ್ವಾಮಿ ವಿವೇಕಾನಂದರು.
ಹಾಗೂ ವಿವೇಕಾನಂದರ ರಾಷ್ಟಭಕ್ತಿ ಯನ್ನು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಿ ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿದ ಅಪ್ರತಿಮ ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜೀವನ ಇತಿಹಾಸ ಅಮರವಾದದ್ದು ನೇತಾಜಿಯವರ ಭಾರತ ರಾಷ್ಟ್ರೀಯ ಸೈನ್ಯದ ಮೂಲಕ ನಡೆಸಿದ ಹೋರಾಟ ಎಂದೂ ಮರೆಯಲಾಗದು. ಭಾರತದ ರಾಷ್ಟ್ರ ಮಂತ್ರವಾದ ಜೈ ಹಿಂದ್ ಘೋಷಣೆಯನ್ನು ಭಾರತೀಯರಿಗೆ ನೀಡಿ ಸದಾ ಕಾಲ ಸ್ಮರಿಸಿಕೊಳ್ಳುವ ಮೂಲಕ ಭಾರತ ಮಾತೆಗೆ ಅರ್ಪಿಸಿಕೊಳ್ಳುವ ಭಾವವನ್ನು ತುಂಬಿದವರು.
ಇಂದು ಜನವರಿ 14 ವಿಶ್ವ ತರ್ಕದಿನ. ತರ್ಕ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ. ಪ್ರತಿಯೊಬ್ಬರೂ ಸರಿಯಾದ ಆಲೋಚನೆಯ ಸ್ವರೂಪವನ್ನು ತಿಳಿಸುವ ಶಾಸ್ತ್ರವೇ ತರ್ಕ ಶಾಸ್ತ್ರವಾಗಿದೆ. ಮನುಷ್ಯನ ಜೀವನ ಆನಂದ ಸಾಗರದಲ್ಲಿ ಇರಲು ಆಲೋಚನೆ ಬಹಳ ಮುಖ್ಯವಾದದ್ದು. ಪ್ರತಿಯೊಬ್ಬನು ಆಲೋಚಿಸುವ ವಿಷಯ, ಪ್ರಮಾಣ, ಸತ್ಯತೆ ಆಲೋಚನೆಯ ಅಂಗವಾಗಿದೆ. ತರ್ಕ ಮತ್ತು ತತ್ವಶಾಸ್ತ್ರದ ಬಗ್ಗೆ ವಿಶೇಷವಾದ ಚಿಂತನೆ ಹಾಗೂ ಜಾಗೃತಿ ತುಂಬಾ ಅಗತ್ಯವಾಗಿದೆ. ಭಾರತೀಯ ತರ್ಕ ಮತ್ತು ತತ್ವಶಾಸ್ತ್ರದ ಬಗ್ಗೆ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ ಮಹದೇವ ಶೆಟ್ಟಿ ಜೈ ಹಿಂದ್ ಅಭಿಯಾನಕ್ಕೆ ಶುಭ ಕೋರಿ ಮಾತನಾಡಿ ಧರ್ಮ ಉಳಿಯಬೇಕು .ಭಾರತ ಮತ್ತು ಭಾರತೀಯರ ಸುಖ ಶಾಂತಿ ನೆಮ್ಮದಿ ಸದಾ ಇರಬೇಕು. ಎಲ್ಲರಿಗೂ ಸಕಲ ಭಾಗ್ಯಗಳು ಕರುಣಿಸಲಿ ಎಂದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ ಮಾತನಾಡಿ ಜೈ ಹಿಂದ್ ಪ್ರತಿಷ್ಠಾನ ವಿವೇಕ ನೇತಾಜಿ ಜೈ ಹಿಂದ್ ಅಭಿಯಾನದ ಮೂಲಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರಳವಾಗಿ ಅಭಿಯಾನವನ್ನು ಹಮ್ಮಿ ಕೊಂಡಿದೆ.
ಜೈ ಹಿಂದ್ ಅಭಿಯಾನದ ಮೂಲಕ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ರಾಷ್ಟ್ರೀಯ ಚಿಂತನೆಗಳನ್ನು ತಿಳಿಸುವ ಜೊತೆಗೆ ದೇಶಕ್ಕಾಗಿ ಅರ್ಪಣೆ ಮಾಡಿಕೊಂಡ ಹಲವಾರು ಮಹನೀಯರ ಚಿಂತನೆಗಳನ್ನು ಯುವಕರಿಗೆ ತಿಳಿಸುವ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

ಋಗ್ವೇದಿ ಯೂತ್ ಕ್ಲಬ್ ನ ಗಣೇಶ, ರಕ್ಷಿತ್, ಸೂರ್ಯ, ಮನೋಜ್, ವಸಂತ್ ,ಹರೀಶ್ ಪುಟ್ಟಣ್ಣ, ಮಾದೇವ ಇದ್ದರು.



