Thursday, January 1, 2026
Google search engine

Homeರಾಜ್ಯಕರ್ನಾಟಕ ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಜೆಡಿಎಸ್‌ ಮನವಿ

ಕರ್ನಾಟಕ ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಜೆಡಿಎಸ್‌ ಮನವಿ

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ಅಂಗೀಕಾರವಾದ ಕಾಂಗ್ರೆಸ್ ಸರ್ಕಾರದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು ಮಸೂದೆ, 2025 ರ ವಿರುದ್ಧ ಜೆಡಿಎಸ್ ಬುಧವಾರ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದ್ದು, ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ಜೆಡಿಎಸ್‌ ಮುಖಂಡರು ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.

ರಾಜ್ಯಪಾಲರನ್ನು ಬುಧವಾರ ಭೇಟಿ ಮಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ನೇತೃತ್ವದ ನಿಯೋಗ, ಕಾಂಗ್ರೆಸ್‌ ನೇತೃತ್ವದ ಸರ್ಕಾರ ಜಾರಿಗೆ ತರಲು ಹೊರಟಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯು ರಾಜ್ಯದ ಜನರ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ. ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದೆ ಗದ್ದಲದ ಮಧ್ಯೆ ಅಂಗೀಕಾರ ಪಡೆದಿದ್ದಾರೆ. ಜನರ ಹಿತಾಸಕ್ತಿಗೆ ವಿರುದ್ಧವಾಗಿರುವ ಇಂತಹ ಮಸೂದೆಯನ್ನು ತಿರಸ್ಕರಿಸಬೇಕು ಎಂದು ಕೋರಿದ್ದಾರೆ.

ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌ ಬಾಬು, ಅತಿವೃಷ್ಟಿ, ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಸಮಸ್ಯೆಗೆ ನೆರವಾಗಬೇಕಾದ ಸರ್ಕಾರ ದ್ವೇಷ ಭಾಷಣ ಮಸೂದೆ ರೂಪಿಸುವಂತಹ ಕೆಲಸದಲ್ಲಿ ಮಗ್ನವಾಗಿದೆ. ವಿರೋಧ ಪಕ್ಷಗಳನ್ನು ನಿಯಂತ್ರಿಸಲು ಹೊರಟಿದೆ ಎಂದರಲ್ಲದೆ ಸರ್ಕಾರದ ನಡೆಯ ವಿರುದ್ಧ ಜೆಡಿಎಸ್‌ ಹೋರಾಟ ಮಾಡಲಿದೆ ಎಂದರು.

ಇನ್ನೂ ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡುವುದನ್ನು ವಿಳಂಬ ಮಾಡಿದೆ, ಆದರೆ ಈಗ ಬೆಂಗಳೂರಿನ ಕೋಗಿಲುವಿನಲ್ಲಿ ಸ್ಥಳಾಂತರಿಸಲ್ಪಟ್ಟ ಅಕ್ರಮ ಕೊಳೆಗೇರಿ ನಿವಾಸಿಗಳಿಗೆ ಪರ್ಯಾಯ ಮನೆಗಳನ್ನು ಒದಗಿಸಲು ಸಿದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಕಲಬುರಗಿ, ಬೀದರ್ ಮತ್ತು ಯಾದಗಿರಿ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದರೂ ಸರ್ಕಾರವು ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಇನ್ನೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಿಲ್ಲ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular