ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಶೀಘ್ರವೇ ಈಡೇರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಒತ್ತಾಯಿಸಿದರು.

ಪಿರಿಯಾಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಸಾರಿಗೆ ಸಿಬ್ಬಂದಿ ಮುಷ್ಕರದಿಂದಾಗಿ ದೈನಂದಿನ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿದ್ದು ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗಿದೆ, ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ಅನಾನುಕೂಲ ಉಂಟಾಗಿದ್ದು ಅವರ ಶೈಕ್ಷಣಿಕ ಜೀವನದ ಮೇಲು ಪ್ರಭಾವ ಬೀರಲಿದೆ, ದೈನಂದಿನ ವ್ಯಾಪಾರ ವಹಿವಾಟು ನಡೆಸುವ ವರ್ತಕರಿಗೂ ಮುಷ್ಕರದ ಬಿಸಿತಟ್ಟಿದ್ದು ದಿನನಿತ್ಯ ಸರ್ಕಾರಿ ಸೇರಿದಂತೆ ವಿವಿಧ ಖಾಸಗಿ ಇಲಾಖೆಗಳಿಗೆ ಸಾರಿಗೆ ಬಸ್ ನಲ್ಲಿ ದಾವಿಸುವ ನೌಕರರಿಗೆ ತೊಂದರೆ ಉಂಟಾಗಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ ಸರ್ಕಾರ ಶೀಘ್ರ ಸಮಸ್ಯೆಗಳನ್ನು ಮನಗಂಡು ಮುಂದಾಗುವ ಅನಾನುಕೂಲ ತಪ್ಪಿಸಲು ಸಾರಿಗೆ ನೌಕರರ ವಿವಿಧ ಬೇಡಿಕೆಗಳಲ್ಲಿ ಆದಷ್ಟು ಬಗೆಹರಿಸಿ ಸಾರಿಗೆ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಬಗೆಹರಿಸುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ಬಸ್ ನಿಲ್ದಾಣಕ್ಕೆ ಆಗಮಿಸಿದ ಖಾಸಗಿ ವಾಹನಗಳು: ಮಂಗಳವಾರ ಮುಂಜಾನೆಯಿಂದಲೇ ಪಟ್ಟಣದ ಸಾರಿಗೆ ಘಟಕದಿಂದ ಹೊರಟ ಸಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿ ಒಂದೆಡೆ ನಿಲ್ಲಿಸಿದ್ದರಿಂದ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಖಾಸಗಿ ವಾಹನಗಳು ಬಸ್ ನಿಲ್ದಾಣದ ಆವರಣಕ್ಕೆ ಧಾವಿಸಿ ಮೈಸೂರು ಬೆಂಗಳೂರು ಕುಶಾಲನಗರ ಮಡಿಕೇರಿ ಸೇರಿದಂತೆ ಪ್ರಮುಖ ನಗರಗಳ ಕಡೆಗೆ ಪ್ರಯಾಣಿಸಿದವು, ಆಗೊಮ್ಮೆ ಈಗೊಮ್ಮೆ ಎಂಬಂತೆ ಸಾರಿಗೆ ಬಸ್ ಗಳು ಸಂಚಾರ ನಡೆಸಿದವು, ಪಿರಿಯಾಪಟ್ಟಣ ಆರಕ್ಷಕ ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸ್ ನಿಲ್ದಾಣದಲ್ಲಿ ಬಂದೋಬಸ್ತ್ ನೀಡಲಾಗಿತ್ತು.
