Wednesday, February 18, 2026
Google search engine

Homeರಾಜಕೀಯಪಿರಿಯಾಪಟ್ಟಣದಲ್ಲಿ ಜೆಡಿಎಸ್ ಗರ್ಜನೆ: ಕಾಂಗ್ರೆಸ್ ವಿರುದ್ಧ ನಿಖಿಲ್ ಕಿಡಿ

ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಗರ್ಜನೆ: ಕಾಂಗ್ರೆಸ್ ವಿರುದ್ಧ ನಿಖಿಲ್ ಕಿಡಿ

ಪಿರಿಯಾಪಟ್ಟಣ : ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ
ಪಿರಿಯಾಪಟ್ಟಣ ಪಟ್ಟಣದ ಸಾಯಿ ಸಮುದಾಯ ಭವನದ ಮುಂಭಾಗ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಕುಮಾರಣ್ಣ ಅವರಿಗೆ ರಾಜಕೀಯ ಶಕ್ತಿ ನೀಡಿ ಮುಖ್ಯಮಂತ್ರಿ ಮಾಡಿದ ಜಿಲ್ಲೆ ಇದು. ಮುಂದಿನ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದೆ. ಮೈಸೂರು ಜಿಲ್ಲೆಯ ವಿಚಾರದಲ್ಲಿ ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ಬಗ್ಗೆ ಕಾರ್ಯಕರ್ತರ ಮನಸ್ಸಿಗೆ ತಕ್ಕಂತೆ ಉತ್ತಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಪಿರಿಯಾಪಟ್ಟಣವನ್ನು ರಕ್ಷಿಸುವ ವಿಚಾರದಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ನಿಲ್ಲುತ್ತೇನೆ,” ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಸಿದ ವಿಚಾರವನ್ನು ಉಲ್ಲೇಖಿಸಿ, “ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿಯ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಈ ಪ್ರಜಾಪ್ರಭುತ್ವದಲ್ಲಿ ಯಾರನ್ನು ಅಧಿಕಾರಕ್ಕೆ ತರುವುದು, ಯಾರನ್ನು ಮನೆಗೆ ಕಳುಹಿಸುವುದು ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಜನತೆ ತೀರ್ಮಾನ ಮಾಡುತ್ತಾರೆ,” ಎಂದು ಹೇಳಿದರು.

ಹುಣಸೂರು ಶಾಸಕ ಹರೀಶ್ ಗೌಡ ಮಾತನಾಡಿ, “ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ 10 ಸಾವಿರ ಕಿಮೀ ಪ್ರವಾಸ ಮಾಡಿ 54 ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಜಾತಿ ಮತ ನೋಡದೆ 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ರೈತರ ಪರ ಕೆಲಸ ಮಾಡುವ ಮುಖ್ಯಮಂತ್ರಿಗಳ ಸಾಲಿನಲ್ಲಿ ಮೊದಲಿಗರು ಕುಮಾರಣ್ಣ,” ಎಂದು ಹೇಳಿದರು.

ಮಾಜಿ ಶಾಸಕ ಸಾರಾ ಮಹೇಶ್ ಮಾತನಾಡಿ, “ಮುಂದಿನ ಚುನಾವಣೆಯನ್ನು ಮಹಾದೇವಣ್ಣ ಅವರ ನಾಯಕತ್ವದಲ್ಲಿ ಎದುರಿಸಲಾಗುತ್ತದೆ. ಕುಮಾರಣ್ಣ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ದಲಿತರು ಹಾಗೂ ಮಹಿಳೆಯರ ಆಶಯವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ತಾತ್ಕಾಲಿಕ ಲಾಭವಿದ್ದರೂ, ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ,” ಎಂದು ಆರೋಪಿಸಿದರು.

ಮಾಜಿ ಶಾಸಕ ಕೆ. ಮಹದೇವ್ ಮಾತನಾಡಿ, “ರೈತರಿಗೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ರೈತರ ಸಮಸ್ಯೆ ಬಗೆಹರಿಯುತ್ತದೆ. 2028ರಲ್ಲಿ ಕುಮಾರಣ್ಣ ಮತ್ತೆ ಮುಖ್ಯಮಂತ್ರಿ ಆಗಬೇಕು. ಅವರ ನಂತರ ನಿಖಿಲ್ ಕುಮಾರಸ್ವಾಮಿ ರಾಜ್ಯದ ಚುಕ್ಕಾಣಿ ಹಿಡಿಯಬೇಕು,” ಎಂದು ಅಭಿಪ್ರಾಯಪಟ್ಟರು.

ಮಾಜಿ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, “ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ನಡೆಸುತ್ತಿದ್ದಾರೆ. ಹೊಗೆಸೊಪ್ಪು ಬೆಳೆ ರೈತರ ಜೀವನಾಡಿಯಾಗಿದ್ದು, ಬೆಲೆ ಹಾಗೂ ಉತ್ಪಾದನಾ ವೆಚ್ಚ ನಡುವಿನ ವ್ಯತ್ಯಾಸದಿಂದ ರೈತರು ಸಂಕಷ್ಟದಲ್ಲಿದ್ದಾರೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಘಟಕ ಅಧ್ಯಕ್ಷ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ , ವಿವೇಕಾನಂದ, ಮಾಜಿ ಮೇಯರ್ ರವಿಕುಮಾರ್, ಎಚ್ ಡಿ ಮಂಜು , ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ರು , ಮುಖಂಡರಾದ ಗಗನ್, ಐಲಾಪುರ ರಾಮು, ಮಾಜಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರವಿ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ನಾಗರಾಜು, ರಾಮಚಂದ್ರ, ಸೇರಿದಂತೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular