ವರದಿ: ವಿನಯ್ ದೊಡ್ಡಕೊಪ್ಪಲು
ಕುಪ್ಪೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಸೂಟ್ ಕೇಸ್, ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ
ಕೆ.ಆರ್.ನಗರ: ಆರ್ಥಿಕವಾಗಿ ಉಳ್ಳವರು ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಅವುಗಳನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸಲು ಸರ್ಕಾರದ ಜತಗೆ ಕೈ ಜೋಡಿಸ ಬೇಕೆಂದು ಪುತ್ತೂರು ತಾಲೂಕು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ. ಎಸ್. ಮಹೇಶ್ ಕುಮಾರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಚಿಕ್ಕಕೊಪ್ಪಲು ಸಿ.ಎಚ್. ದೇವೇಗೌಡ ಸ್ಮಾರಕ ಉಚಿತ ವಾಚನಾಲಯ ಕೇಂದ್ರದ ವತಿಯಿಂದ ಸಮವಸ್ತ್ರ, ಸೂಟ್ ಕೇಸ್, ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಸ್ಕೃತಿ- ನೈತಿಕ ಪ್ರಜ್ಞೆ- ಸಾಮಾಜಿಕ ಜವಾಬ್ದಾರಿಯನ್ನು ಕಲಿಸುವ ಸರ್ಕಾರಿ ಕನ್ನಡ ಶಾಲೆಗಳು ಇಂದು ಮುಚ್ಚುವ ಹಂತಕ್ಕೆ ತಲುಪಲು ಖಾಸಗಿ ಶಾಲೆಗಳ ವ್ಯಾಮೋಹವೇ ಪ್ರಮುಖ ಕಾರಣವಾಗಿದ್ದು ಇವುಗಳ ಉಳಿವಿಗೆ ಈ ಶಾಲೆಗಳಲ್ಲಿ ಓದಿ ಉನ್ನತ ಹುದ್ದೆಯಲ್ಲಿ ಇರುವವರು ಶ್ರಮಿಸಬೇಕು ಎಂದರು.
ಸರ್ಕಾರಿ ಶಾಲೆಗಳು ಉಚಿತ ಶಿಕ್ಷಣದೊಂದಿಗೆ ದೈಹಿಕ ಹಾಗೂ ಒತ್ತಡ ರಹಿತ ಕಲಿಕೆ ಅವಕಾಶ ಮಾಡಿಕೊಟ್ಟಿದ್ದು ಪ್ರಾಥಮಿಕ ಶಿಕ್ಷಣವನ್ನು ಒತ್ತಡ ರಹಿತವಾಗಿ ಕಲಿಯುವ ಮಗು ಭವಿಷ್ಯದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯ ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸ ಬೇಕೆಂದರು.
“ಪರುಶುರಾಮ್ ಅವರ ಸೇವೆ ವಿಸ್ತಾರವಾಗಲಿ”
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಉಪನ್ಯಾಸಕ ಕುಪ್ಪೆ.ಎ.ಜವರೇಗೌಡ ಮಾತನಾಡಿ ಬಡ ಕುಟುಂಬದಲ್ಲಿ ಹುಟ್ಟಿ ಶಿಕ್ಷಣದಲ್ಲಿ ಯಶಸ್ಸು ಕಂಡು ಮೈಸೂರು ಯುವರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ ಸಿ.ಡಿ.ಪರುಶುರಾಮ್ ಅವರು ಹುಟ್ಟೂರಿನ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ನಿಜಕ್ಕೂ ಮಾದರಿ. ಊರಿಗೆ ಗ್ರಂಥಾಲಯ, ವಾಚನಾಲಯ ಹಾಗೂ ಸರ್ಕಾರಿ ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಇವರ ಸೇವೆ ಇನ್ನಷ್ಟು ಹೆಚ್ಚಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಲಾಭಿವೃಧಿ ಸಮಿತಿ ಅಧ್ಯಕ್ಷ ತುಳಸಿಶಿವಪ್ರಸಾದ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿ.ಅರ್.ಸಿ.ವೆಂಕಟೇಶ್, ಬಿ.ಅರ್.ಪಿ. ಸುಬ್ಬುರಾಮನ್, ಸಿ.ಅರ್.ಪಿ.ಗಳಾದ ವಸಂತ್, ಚಿಕ್ಕಕೊಪ್ಪಲು ರಮೇಶ್, ಗ್ರಾಮದ ಹಿರಿಯ ಮುಖಂಡ ಡಿ.ರಾಮಕೃಷ್ಣೇಗೌಡ, ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್, ಕುಪ್ಪೆ ನೀರುಬಳಕೆದಾರರ ಸಂಘದ ಅಧ್ಯಕ್ಷ ಸದಾಶಿವಕೀರ್ತಿ,ಚಿಮುಕು ಬಳಗದ ಅಧ್ಯಕ್ಷ ಮುದ್ದನಹಳ್ಳಿ ಸೋಮಪ್ಪ, ಎಳನೀರು ಉದ್ಯಮಿ ಗಂಡುಕುಮಾರ್ ಗ್ರಾಮದ ಮುಖಂಡರಾದ ಚಂದ್ರಶೇಖರಯ್ಯ, ಬಾಲಕೃಷ್ಣ, ನಂಜುಂಡಯ್ಯ, ಚಂದ್ರಯ್ಯ , ವೆಂಕಟರಾಮ್, ಪ್ರಸನ್ನಕುಮಾರ್, ಶ್ರೀಧರ್, ಆನಂದ್, ಶಿವಣ್ಣ, ಮುಖ್ಯ ಶಿಕ್ಷಕ ಶ್ರೀರಾಮಪುರ ಶ್ರೀನಿಧಿ, ಶಿಕ್ಷಕಿ ಸರಸ್ವತಿ ಸೇರಿದಂತೆ ಮತ್ತಿತರರು ಹಾಜರಿದ್ದರು.