ಮಂಗಳೂರು : ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರದ ವಿರುದ್ಧ ನಾಗರಿಕರು ದೃಢವಾಗಿ ನಿಲ್ಲಬೇಕು ಎಂದು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಯೆನೆಪೋಯ (ಪರಿಗಣಿತ ವಿಶ್ವ ವಿದ್ಯಾನಿಲಯ) ಘಟಕ ಸಂಸ್ಥೆಯಾಗಿರುವ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ & ಮ್ಯಾನೇಜ್ಮೆಂಟ್, ಕುಳೂರು ಕ್ಯಾಂಪಸ್‌ನಲ್ಲಿ ವಿಶ್ವ ಮಾನವೀಯ ಮೌಲ್ಯಗಳ ಕೋಶವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಮಹತ್ವವನ್ನು ಒತ್ತಿಹೇಳಿ, ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಒಂದು ಆಯ್ಕೆ ಅಲ್ಲ, ಅದು ವಿಶ್ವಾಸ ನಿರ್ಮಾಣದ ಮೂಲಾಧಾರವಾಗಿದೆ ಎಂದರಲ್ಲದೆ, ನ್ಯಾಯವು ಕೇವಲ ನೀಡುವುದು ಮಾತ್ರವಲ್ಲ, ಅದನ್ನು ನ್ಯಾಯಸಮ್ಮತವಾಗಿ ಪಡೆಯುವುದೂ ಮುಖ್ಯ ಎಂದು ತಿಳಿಸಿದರು.
ಬಳಿಕ ಗೌರವ ಅತಿಥಿಯಾಗಿ ಭಾಗವಹಿಸಿದ ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷರಾದ ಶ್ರೀ ಆರ್. ಉಪೇಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣವು ಜ್ಞಾನ ನೀಡುವುದರ ಜೊತೆಗೆ ವ್ಯಕ್ತಿತ್ವ ಮತ್ತು ಗುರಿಯನ್ನು ರೂಪಿಸುವುದರಲ್ಲಿ ಮಹತ್ವ ದ್ದೆಂದು ಹೇಳಿದರು. ನಿಜವಾದ ನಾಯಕತ್ವವು ಇತರರನ್ನು ಪ್ರೇರೇಪಿಸುವುದಲ್ಲದೆ, ಅವರ ಸಾಮರ್ಥ್ಯವನ್ನು ಅರಿಯಲು ಸಹಾಯ ಮಾಡುವುದಾಗಿದೆ. ದೃಷ್ಟಿ ಮತ್ತು ಬದ್ಧತೆ ಒಂದಾದಾಗ ಸಂಸ್ಥೆಗಳು ಬೆಳೆಯುತ್ತವೆ ಎಂದು ತಿಳಿಸಿದರು.



