ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೆ.ಆರ್.ನಗರ ಜಿಲ್ಲಾ ಜನಜಾಗೃತಿ ವೇದಿಕೆಯ 2025-26ನೇ ಸಾಲಿನ ಪ್ರಥಮ ಸಭೆಯನ್ನು ಕೆ.ಆರ್.ನಗರ ಯೋಜನಾ ಕಚೇರಿಯ ಸಭಾಭವನದಲ್ಲಿ ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಹಂದನಹಳ್ಳಿ ಸೋಮಶೇಖರ್ ರವರು ವಹಿಸಿದ್ದು, ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಶ್ರೀ ಜಯಂತ್ ಪೂಜಾರಿ ಸರ್ ರವರು, ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಅಶ್ವಥ್ ಕುಮಾರೆ ಗೌಡ, ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಮಮತಾ ರಾವ್ ರವರು ಹಾಗೂ ಏಳೂ ತಾಲೂಕುಗಳ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿಯವರು, ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರು ಭಾಗವಹಿಸಿದ್ದು, ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.

ಜಿಲ್ಲಾ ಪ್ರಬಂಧಕರಾದ ಶ್ರೀ ರಾಜೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿ ಗತ ಸಭೆಯ ವರದಿಯನ್ನು ಮಂಡಿಸಿದರು. ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಮಾತನಾಡುತ್ತಾವಿಶೇಷವಾಗಿ ಈ ಸಭೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆದಿದ್ದು, ಸರ್ವ ಪದಾಧಿಕಾರಿಗಳೂ ಕೂಡ ಬಹಳ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದ್ದೀರಿ. ಪ್ರತಿಯೊಬ್ಬರೂ ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿ ಇರುವವರೇ ಈ ವೇದಿಕೆಯ ಪದಾಧಿಕಾರಿಗಳಾಗಿದ್ದು, ನಿಮ್ಮೆಲ್ಲರ ಒತ್ತಡಗಳಿದ್ದರೂ ಈ ಜಿಲ್ಲೆಯಲ್ಲಿ ಪೂಜ್ಯರ ಪ್ರತಿಯೊಂದು ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸರ್ವ ರೀತಿಯ ಸಹಕಾರವನ್ನು ನೀಡುತ್ತಿದ್ದೀರಿ ತಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮವನ್ನು ವಿಶೇಷ ಮಾದರಿ ಕಾರ್ಯಕ್ರಮವಾಗಿ ನಡೆಸಬೇಕೆಂದು, ಈ ಮೂಲಕ ಜಿಲ್ಲಾದ್ಯಂತ ದುಶ್ಚಟದ ವಿರುದ್ಧ ಜಾಗೃತಿ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ರವಾನೆಯಾಗಬೇಕೆಂದು ಸಲಹೆ ನೀಡುತ್ತಾ, ಜಿಲ್ಲೆಯಲ್ಲಿ ನಡೆಯುವ ಮದ್ಯವರ್ಜನ ಶಿಬಿರಗಳಿಗೆ ಸ್ಥಳೀಯ ಗುಣಮಟ್ಟದ ಶಿಬಿರಾರ್ಥಿಗಳ ಆಯ್ಕೆ ಬಗ್ಗೆ ಮಾರ್ಗದರ್ಶನ ಮಾಡಿದರು.
ಕ್ಷೇತ್ರ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ 2025-26 ನೇ ಸಾಲಿನ ಪ್ರಥಮ ಮೂರು ತಿಂಗಳ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದ ವರದಿ ಮಂಡಿಸಿದರು. ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರು 2025-26ನೇ ಸಾಲಿನ ಜಿಲ್ಲೆಯ ಕ್ರಿಯಾಯೋಜನೆ ಬಗ್ಗೆ, ವಿವಿಧ ಅನುದಾನಗಳ ಬಗ್ಗೆ ವಿವರಿಸಿದರು.
ಈ ಸಭೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳ ಹಾಗೂ ಅನಧಿಕೃತ ಮಾದಕ ವಸ್ತುಗಳ ಮಾರಾಟದ ಬಗ್ಗೆ, ಅದನ್ನು ತಡೆಗಟ್ಟಲು ಹಕ್ಕೊತ್ತಾಯ ಮಂಡನೆ ಬಗ್ಗೆ ಚರ್ಚೆ ವಿಮರ್ಶೆಗಳು ನಡೆದು ಸರ್ವರ ಒಪ್ಪಿಗೆಯಂತೆ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಅಂತಿಮವಾಗಿ ಸಭಾಧ್ಯಕ್ಷರು ಪೂಜ್ಯರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಜಿಲ್ಲಾದ್ಯಂತ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಒಗ್ಗಟ್ಟಾಗಿ ಶ್ರಮಿಸೋಣ, ಇಂತಹ ಸಭೆಗಳಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಸಲಹೆಗಳನ್ನು ವ್ಯಕ್ತಪಡಿಸಿದ್ದು ಉತ್ತಮ ಚರ್ಚೆಗಳು ನಡೆದಿವೆ ಎಂದು ಮಾತನಾಡಿದರು.
ಸಾಲಿಗ್ರಾಮ ತಾಲೂಕು ಯೋಜನಾಧಿಕಾರಿ ಶ್ರೀ ಉಮೇಶ್ ರವರು ಸ್ವಾಗತಿಸಿದ ಸಭೆಯು, ಪಾಂಡವಪುರ ತಾಲೂಕು ಯೋಜನಾಧಿಕಾರಿ ಶ್ರೀ ಯಶವಂತರವರು ಧನ್ಯವಾದ ನೀಡುವುದರ ಮೂಲಕ ಸಭೆ ಮುಕ್ತಾಯಗೊಂಡಿತು.