ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾರ್ವಜನಿಕರ ಅನುಕೂಲಕ್ಕಾಗಿ ಕೆ.ಆರ್.ನಗರದಿಂದ ಹುಣಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಮಾಡುತ್ತಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಇರುವ ಹುಣಸೂರು – ಕೆ.ಆರ್.ನಗರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು ಇದಕ್ಕೆ ಸ್ಥಳೀಯರು ಸಹಕಾರ ನೀಡಿದ್ದಾರೆ. ಅಲ್ಲದೆ ರಸ್ತೆ ಬದಿಗಳಲ್ಲಿರುವ ವಿದ್ಯುತ್ ಕಂಬಗಳು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವಂತಹ ಕೆಲವು ಮರಗಳನ್ನು ತೆರವುಗೊಳಿಸಿ ಅಗತ್ಯವಿರುವಡೆ ಮತ್ತೆ ಗಿಡಗಳನ್ನು ನೆಟ್ಟಿ ಪೋಷಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಗರುಡುಗಂಭ ವೃತ್ತದಿಂದ ಮಾರಿಗುಡಿ ಕೊಪ್ಪಲು ಗ್ರಾಮಕ್ಕೆ ತೆರಳುವ ಕ್ರಾಸ್ ವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು ಪಟ್ಟಣಕ್ಕೆ ಮೆರುಗು ನೀಡುವಂತೆ ರಸ್ತೆ ಮಧ್ಯಭಾಗರಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುವುದಲ್ಲದೆ ಕಾಮಗಾರಿ ಸಂದರ್ಭದಲ್ಲಿ ಅಗತ್ಯ ಇರುವ ಕಡೆ ಒಳಚರಂಡಿ ವ್ಯವಸ್ಥೆ ಹಾಗೂ ನೀರು ಸರಬರಾಜು ಪೈಪ್ ಲೈನ್ ವ್ಯವಸ್ಥೆಯನ್ನು ಪೂರ್ಣಗೊಳಿಸುವಂತೆ ಪುರಸಭಾ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಅಲ್ಲದೆ ಮುಳ್ಳೂರು ರಸ್ತೆ, ಮುಸ್ಲಿಂ ಬಡಾವಣೆ, ಜೂನಿಯರ್ ಕಾಲೇಜು ರಸ್ತೆ ಹಾಗೂ ಕೆ.ಆರ್.ನಗರ ಮತ್ತು ಹುಣಸೂರು ಸಂಪರ್ಕ ಕಲ್ಪಿಸುವ ಪ್ರವಾಸಿ ಮಂದಿರದ ಮುಂಭಾಗದ ಐದೂ ರಸ್ತೆಗಳು ಕೂಡುವ ಸ್ಥಳದಲ್ಲಿ ವೃತ್ತ ಒಂದನ್ನು ನಿರ್ಮಿಸಿ ಯಾವುದೇ ಅಡಚಣೆಯಾಗದಂತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೆಳಿದರು.
ಇದಕ್ಕೆ ಎರಡು ಬದಿ ಅಂಗಡಿ ಮಾಲೀಕರುಗಳು ಸಹಕಾರ ನೀಡಬೇಕೆಂದು ಕೋರಿದ ಶಾಸಕರು ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿಯನ್ನು ನಿರ್ಮಾಣ ಮಾಡಲಾಗುವುದಲ್ಲದೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಯೋಜನೆ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕರಾದ ಕೆ.ಎನ್.ಪ್ರಸನ್ನಕುಮಾರ್, ಸೈಯದ್ ಜಾಬೀರ್, ಸರಿತಾಜವರಪ್ಪ, ಪುರಸಭಾ ಮಾಜಿ ಅಧ್ಯಕ್ಷರಾದ ಶಿವುನಾಯಕ್, ಸೈಯದ್ ಸಿದ್ದಿಕ್, ನರಸಿಂಹರಾಜು, ಮಾಜಿ ಸದಸ್ಯರಾದ ನಟರಾಜ್, ಶಂಕರ್, ವಿನಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕಾಮೇನಹಳ್ಳಿಹೇಮಂತ್, ಸಾಲಿಗ್ರಾಮ ಎಸ್‌ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ಗ್ರಾಪಂ ಸದಸ್ಯ ಕೆ.ಪಿ.ಜಗದೀಶ್, ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಗರುಡುಗಂಭ ಮಂಜುನಾಥ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಪುರಸಭಾ ಮುಖ್ಯಾಧಿಕಾರಿ ರಮೇಶ್, ಸೆಸ್ಕಾಂ ಎಇಇ ಅರ್ಕೇಶ್ ಮೂರ್ತಿ, ಲೋಕೋಪಯೋಗಿ ಇಲಾಖೆ ಜೆ.ಇ.ಸಿದ್ದೇಶ್ವರಪ್ರಸಾದ್, ಉಪವಲಯ ಅರಣ್ಯ ಅಧಿಕಾರಿ ಪ್ರಸನ್ನ ಸೇರಿದಂತೆ ಇನ್ನಿತರರು ಇದ್ದರು.



