ಬಳ್ಳಾರಿ: ನಟಸಾರ್ವಭೌಮ, ಕಲಾ ತಪಸ್ವಿ, ಕಲಾ ಪರಿಪೂರ್ಣರೆಂದು ಹಲವಾರು ಬಿರುದುಗಳಿ ಪಾತ್ರರಾಗಿದ್ದ ಬಳ್ಳಾರಿ ರಾಘವರ ಜಯಂತಿ ಹಿನ್ನೆಲೆಯಲ್ಲಿ, ಇಂದು ವಿಪ್ರ ಸಂಘಟನೆಯಿಂದ ಭಕ್ತಿಪೂರ್ವಕವಾಗಿ ಪುಷ್ಪ ನಮನ ಸಲ್ಲಿಸುವ ಮೂಲಕ ದಿವಂಗತ ರಾಘವ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಹೃದಯ ಭಾಗವಾದ ರಾಯಲ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಘವರ ಪುತ್ಥಳಿಗೆ ಬಳ್ಳಾರಿ ಬ್ರಾಹ್ಮಣ ಒಕ್ಕೂಟ ಅಧ್ಯಕ್ಷರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸಂಘಟನಾ ಕಾರ್ಯದರ್ಶಿ ಆರ್. ಪ್ರಕಾಶ್ ರಾವ್ ಅವರು ಪುಷ್ಪ ನಮನ ಸಲ್ಲಿಸಿ ಬಳ್ಳಾರಿ ರಾಘವರ ಅಮೋಘ ಅಭಿನಯಗಳ ಕುರಿತು ಮೆಲುಕು ಹಾಕಿದರು.
ಬಳ್ಳಾರಿ ರಾಘವರು ವಿದೇಶೀಯರನ್ನೂ ಸಹ ತಮ್ಮ ಅಭಿನಯ ಕಲಾ ಚತುರತೆಯಿಂದ ಆಕರ್ಷಿಸಿದ್ದರು. ಅವರು ಕೇವಲ ಬಳ್ಳಾರಿಗಷ್ಟೇ ಅಲ್ಲ, ಜಾಗತಿಕ ಮಟ್ಟದ ಮಹಾನ್ ಕಲಾವಿದರಾಗಿದ್ದರು. ಕನ್ನಡ, ತೆಲುಗು, ಇಂಗ್ಲೀಷ್ ಭಾಷೆಗಳಲ್ಲಿ ಅವರ ನಾಟಕ ಪ್ರದರ್ಶನಗಳು ಅಂದಿನ ಕಾಲದಲ್ಲಿ ಬಹಳಷ್ಟು ಆಕರ್ಷಿಸಿದ್ದವು. ಕಲೆಯ ಮೂಲಕ ಈ ನಾಡಿನ ಸಂಸ್ಕೃತಿ ಇತಿಹಾಸ, ಸಾಮಾಜಿಕ ಕ್ರಾಂತಿಯನ್ನು ಮೂಡಿಸಿದ್ದ ಬಳ್ಳಾರಿ ರಾಘವರು ಕೋಮು ಸೌಹಾರ್ದ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದರು.
ಕಲಾ ಪೋಷಕರು, ಕಲಾ ಪ್ರೇಮಿಗಳೂ ಆಗಿರುವ ಅಂದಿನ ಸಚಿವರಾಗಿದ್ದ ಜಿ.ಜನಾರ್ದನರೆಡ್ಡಿ, ಬಿ.ಶ್ರೀರಾಮುಲು, ಜಿ.ಸೋಮಶೇಖರ್ ರೆಡ್ಡಿ ಮತ್ತು ಜಿ.ಕರುಣಾಕರರೆಡ್ಡಿ ಅವರು ಬಳ್ಳಾರಿ ರಾಘವರ ಗೌರವಾರ್ಥ ರಾಯಲ್ ವೃತ್ತದಲ್ಲಿ ಪುತ್ಥಳಿ ನಿರ್ಮಿಸಿ ಗೌರವ ಸಲ್ಲಿಸಿದ್ದರು.
ಬಳ್ಳಾರಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಾಘವರ ಪುತ್ಥಳಿ ಅನಾವರಣಗೊಂಡಿತ್ತು. ಕಲೆಯ ನೆಲೆಯಾದ ಬಳ್ಳಾರಿಗರು ಅದರಲ್ಲೂ ವಿಶೇಷವಾಗಿ ಕಲಾವಿದರ ಮತ್ತು ಕಲಾಭಿಮಾನಿಗಳು ಯಾವುದೇ ಜಾತಿ, ಭೇದ ಇಲ್ಲದೇ ಪ್ರತಿನಿತ್ಯ ಬಳ್ಳಾರಿ ರಾಘವರ ಪುತ್ಥಳಿ ದರ್ಶಿಸಿ ಸ್ಫೂರ್ತಿ ಹೊಂದುತ್ತಿದ್ದಾರೆ ಎಂದರು.
ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಪದಾಧಿಕಾರಿಗಳಾದ ಡಾ. ಶ್ರೀನಾಥ್, ರವೀಂದ್ರನಾಥ್, ಬಜಾರದ ಹರಿಪ್ರಸಾದ್, ಸಿಮೆಂಟ್ ಗಿರಿ, ನೇಮಕಲ್ ರಾವ್, ಸತೀಶ್, ನಂದಕಿಶೋರ್, ಹಿರಿಯ ಕಲಾವಿದರಾದ ಕೆ. ಜಗದೀಶ್, ಎಸ್. ವಿಜಯಸಿಂಹ, ವಿಷ್ಣು, ಗಿರಿ ಕಂಪ್ಯೂಟರ್, ಹಿರಿಯ ಕಲಾವಿದರಾದ ವೀರನಗೌಡ ಕುಣಿಗಿರಿ, ಸಿಂಧನೂರು ಶ್ರೀಧರ, ಪವನ್, ರಂಗನಾಥ, ವಿಠ್ಠಲ್, ಹನುಮಂತಾಚಾರ್, ಗಿರಿ, ವಿಜಯರಾವ್, ಹಡ್ಲಿಗಿ ಸುರೇಂದ್ರ, ಸತೀಶ್ ದೇಸಾಯಿ, ರಾಘವೇಂದ್ರ ಮೋಹನ್, ಕಲಾವಿದ ನಾಗಭೂಷಣ್ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.