ಬಳ್ಳಾರಿ: ಜಾತಿ, ಧರ್ಮ ಎಂಬ ಎಲ್ಲೆ ಇರದ ಆದರ್ಶಪ್ರಾಯ ಶಿಕ್ಷಕನು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಮಾಡುತ್ತಾನೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊಮಲ್ಲಿಕಾ ಘಂಟಿ ಅವರು ಹೇಳಿದರು.
ಬುಧವಾರ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಕ ವರ್ಗದಲ್ಲಿ ದ್ರೋಣಾಚಾರ್ಯರ ಪೌರಾಣಿಕ ಹಿನ್ನೆಲೆಯ ಗುರು ಪರಂಪರೆ ಹಾಗೂ ಗುರು ಗೋವಿಂದ ಭಟ್ಟರ ತಾತ್ವಿಕ ಮೂಲದ ಗುರು ಪರಂಪರೆ ಎಂಬ ಎರಡು ವಿಧಗಳಿವೆ. ಗುರುದಕ್ಷಿಣೆ ಕೇಳುವ ಪರಂಪರೆಗೆ ತದ್ವಿರುದ್ಧವಾದವನೇ ನಿಜವಾದ ಶಿಕ್ಷಕ. ಸಮಾಜಮುಖಿ ಹಾಗೂ ಅಧ್ಯಯನಶೀಲ ಶಿಕ್ಷಕರುಗಳಿಂದ ವಿದ್ಯಾರ್ಥಿಗಳ, ಸಮುದಾಯದ ಮನ ಮುಟ್ಟುವಂತೆ ವಿಷಯಗಳ ಜ್ಞಾನ ಬಿತ್ತಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಜಕೀಯ, ಧಾರ್ಮಿಕ ಹಾಗೂ ಸಮಾಜ ಸುಧಾರಣೆಯಲ್ಲಿ ಸಮಾನತೆ ಮತ್ತು ಏಕತೆ ಸ್ವರೂಪವಾಗಿರುವ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಅದೇರೀತಿಯಾಗಿ ಕಲ್ಯಾಣ-ಕರ್ನಾಟಕ ಭಾಗದ ವಿಮೋಚನೆಗೆ ಶ್ರಮಿಸಿದ ಅನೇಕ ಪುರಷ-ಮಹಿಳಾ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನ ರೂಪಿಸುವುದು ಶಿಕ್ಷಕರ ಪ್ರಥಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶಪ್ರಾಯ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ವಿವಿಯ ಕುಲಸಚಿವ ಸಿ.ನಾಗರಾಜು ಅವರು ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನಗಳ ಮೂಲಕ ನಿತ್ಯವೂ ವಿದ್ಯಾರ್ಥಿಯಾಗಬೇಕು. ಇದರಿಂದ ತಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಜವಾಬ್ದಾರಿಯುತ ಪ್ರಜೆಯನ್ನಾಗಿಸುವ ಮಹತ್ತರ ಕಾರ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಪ್ರೊ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವರು (ಮೌಲ್ಯಮಾಪನ) ಪ್ರೊ.ಎನ್.ಎಂ.ಸಾಲಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯರಾದ ಡಾ.ರಾಜೇಂದ್ರ ಪ್ರಸಾದ್ ಎನ್.ಎಲ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್, ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಡಾ.ಶಶಿಧರ್ ಕೆಲ್ಲೂರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿವಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮತ್ತು ಘಟಕಗಳ ಮುಖ್ಯಸ್ಥರು, ಸಂಯೋಜಕರುಗಳು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.