ಹುಣಸೂರು : ಹದಿನೈದನೆಯ ಶತಮಾನದಲ್ಲೇ ಜಾತೀಯತೆ ಮತ್ತು ಅಸ್ಪೃಶ್ಯತೆಯ ಬಗ್ಗೆ ಧ್ವನಿ ಎತ್ತಿದ್ದ ಕನಕ ದಾಸರು ಒಬ್ಬ ಶ್ರೇಷ್ಠ ಕವಿ. ಈ ಮಣ್ಣಿನ ಸಂತನಾಗಿ ಹೊರಹೊಮ್ಮಿದರು ಎಂದು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಬಣ್ಣಿಸಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಶಾಲೆ ಮತ್ತು ರೋಟರಿ ಕ್ಲಬ್ ಆಯೋಜಿಸಿದ್ದ 517ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಮಾತನಾಡಿ ಎಂದರೆ ಕುಲ, ಕುಲ ಕುಲವೆಂದು ಬಡಿದಾಡದಿರಿ ಎಂದು ಜಾತಿಯ ಸಮಾನತೆಯ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದರು. ವಿಪರ್ಯಾಸವೆಂದರೆ ಇಂದಿಗೂ ಜಾತೀಯತೆ ಮಿತಿಮೀರಿದೆ ಎಂದರು.
ಸಮಾಜದಲ್ಲಿ ಸಾಮಾಜಿಕ ಹಾಗೂ ರಾಜಕೀಯ, ಆರ್ಥಿಕ ವ್ಯವಸ್ಥೆ ಬದಲಾಗಬೇಕು. ಸಂಕುಚಿತ ಭಾವನೆಯ ಮನದಲ್ಲಿ ಕುಳಿತಿರುವ ಜಾತೀಯತೆ ಮರೆಯಾಗಬೇಕು. ಹೆಣ್ಣ, ಗಂಡೆಂಬ ಭೇದವಿಲ್ಲದೆ ಶೈಕ್ಷಣಿಕವಾಗಿ, ಮುಂದುವರೆದು ಅಂತರ್ ಜಾತಿ ವಿವಾಹಗಳು ಅಧಿಕವಾದಾಗ ಕನಕದಾಸರಂತೆ ಆದರ್ಶ ಪಾಲಿಸಿದರೆ ಜಾತಿ ಎಂಬ ಪಿಡುಗು ಸಮಾಜದಿಂದ ದೂರವಾಗಬಹುದು ಎಂದು ತಿಳಿಸಿದರು.
ರೋಟರಿ ಶಾಲೆಯ ದೈಹಿಕ ಶಿಕ್ಷಕ ಪ್ರಸನ್ನ ಕನಕ ದಾಸರ ಹುಟ್ಟಿನಿಂದ ಅಂತ್ಯ ಕಾಲದವರೆಗಿನ ಅವರ ಬದುಕು ಬರಹದ ಜೀವನದ ಪುಟಗಳನ್ನು ತೆರೆದಿಟ್ಟು ಮಕ್ಕಳಿಗೆ ಅವರ ಮೌಲ್ಯವನ್ನು ತಿಳಿಸಿಕೊಟ್ಟರು.
ಶಿಕ್ಷಕ ಲೋಕೇಶ್ ಕನಕದಾಸರ ಬಗ್ಗೆ ಮಾತನಾಡಿ, ಕವಿತೆಯೊಂದನ್ನು ಬರೆದು ಗಾನದ ಮೂಲಕ ಹಾಡಿ ಮಕ್ಕಳನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ದೀಪ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹರೀಶ್, ಶಿಕ್ಷಕರಾದ ಅಕ್ಮಲ್, ಷರೀಫ್, ಸರ್ಮಿನಾ ಪರ್ವಿನ್,ಮಮತಾ ಕೆ.ಬಿ., ಆಶಾ, ಕೃತಿಕಾ, ಫಾತೀಮ, ಸಿಂಧು ಹಾಗೂ ಶ್ರೀನಿವಾಸ್ ಇದ್ದರು.



