ಚಾಮರಾಜನಗರ: ಜನರಿಗೆ ಅರ್ಥವಾಗುವ ಸರಳ ಕೀರ್ತನೆಗಳನ್ನು ರಚಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಹೆಚ್ಚಿನ ಒತ್ತು ನೀಡಿದ ಕನಕದಾಸರು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಕನಕದಾಸರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ವರ್ಗಗಳಿಗೂ ಅನ್ವಯವಾಗುವ, ಜಾಗೃತಗೊಳಿಸುವ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ಎಚ್ಚರಿಸಿದರು. ಸಂತರ, ತತ್ವಸಿದ್ದಾಂತ, ವಿಚಾರಧಾರೆ, ಚಿಂತನೆಗಳನ್ನು ಅರಿಯಲು ಸರ್ಕಾರ ವಿವಿಧ ಮಹಾಪುರುಷರ, ದಾರ್ಶನಿಕರ ಜಯಂತಿಗಳನ್ನು ಆಚರಿಸಲು ಅನುವು ಮಾಡಿಕೊಟ್ಟಿದೆ. ಅವರ ಸಂದೇಶಗಳನ್ನು ಅರಿತು ಸಮಾಜದ ಇತರರಿಗೂ ಮನವರಿಕೆ ಮಾಡುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಮೈಸೂರಿನ ಸಂದರ್ಶಕ ಪ್ರಾಧ್ಯಾಪಕರು ಹಾಗೂ ಸಂಶೋಧಕರಾದ ಡಾ. ರಾಜಶೇಖರ ಜಮದಂಡಿ ಅವರು ಕನಕದಾಸರು ಆಧ್ಯಾತ್ಮದ ದಿವ್ಯದೃಷ್ಠಿ ಹೊಂದಿದ್ದರು. ಮನಸ್ಸಿನ ಕಲ್ಮಶವನ್ನು ತೊಡೆದುಹಾಕಿದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ. ಮನಸ್ಸಿನ ಕಲ್ಮಶ ತಿಳಿಯಲು ಅಂತರಂಗದ ಕಣ್ಣು ತೆರೆಯಬೇಕು. ಅಂತರಂಗ, ಬಹಿರಂಗ ಶುದ್ದಿಯನ್ನು ಜೀವನದಲ್ಲಿ ಎಲ್ಲರು ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಬಂಡೀಪುರ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ. ಕಂಟ್ರಾಕ್ಟರ್, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಬಸವರಾಜು, ತಾಲೂಕು ಸಮಾಜದ ಅಧ್ಯಕ್ಷರು ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರಾದ ಉಮೇಶ್, ಮುಖಂಡರಾದ ರಾಜಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ ಕಾರ್ಯಕ್ರಮದಲ್ಲಿ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಶೆಟ್ಟಿ ಅವರು ಚಾಲನೆ ನೀಡಿದರು. ನಂತರ ಶಾಸಕರಾದ ಸಿ. ಪುಟ್ಟರಂಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮೆರವಣಿಗೆಯಲ್ಲಿ ಭಾಗವಹಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಗೊರವರ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಅಕರ್ಷಕ ಮೆರುಗು ನೀಡಿದವು.