ವರದಿ: ಸ್ಟೀಫನ್ ಜೇಮ್ಸ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಕಾನೂನು ತೊಡಕಿಗೆ ಸಿಲುಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದೇ ಶೋ ಮುಂದುವರೆದಿದ್ದ ಕಾರಣ, ರಾಮನಗರ ಜಿಲ್ಲಾಡಳಿತ ಇಂದು ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದೆ.
ಆದರಿಂದಾಗಿ ಶೋ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮನೆಯೊಳಗಿದ್ದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಆಯೋಜಕರು ಈಗ ಮುಂದಿನ ನಡೆ ಕುರಿತು ತುರ್ತು ಚರ್ಚೆ ನಡೆಸುತ್ತಿದ್ದಾರೆ. ಇದು ಮೊದಲ ಬಾರಿಗೆ ಬಿಗ್ ಬಾಸ್ ಮಧ್ಯದಲ್ಲೇ ನಿಂತಿರುವುದಲ್ಲ. 2021ರಲ್ಲಿ ನಡೆದ ಸೀಸನ್ 8 ಕೂಡ ಕೊರೊನಾ ಹಾವಳಿಯಿಂದ ಮಧ್ಯದಲ್ಲಿ ನಿಲ್ಲಿಸಲಾಗಿತ್ತು. ಆಗಲೂ ಸುಮಾರು 70 ದಿನಗಳ ನಂತರ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿತ್ತು. ಪರಿಸ್ಥಿತಿ ಸಹಜವಾದ ಬಳಿಕ ಒಂದೂವರೆ ತಿಂಗಳ ಬಳಿಕ ಶೋ ಮರುಾರಂಭವಾಯಿತು. ಈ ಬಾರಿ ಕೂಡ ಅದೇ ರೀತಿಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.
ಸೀಸನ್ 12ನಲ್ಲಿ ಕಾಕ್ರೋಜ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ ಶೆಟ್ಟಿ, ರಾಶಿಕಾ, ಧ್ರುವಂತ್ ಮುಂತಾದವರು ಭಾಗವಹಿಸಿದ್ದರು. ಅವರನ್ನು ತಾತ್ಕಾಲಿಕವಾಗಿ ರಾಮನಗರ ತಾಲೂಕಿನ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ 12 ರೂಮ್‌ಗಳನ್ನು ಬುಕ್ ಮಾಡಲಾಗಿದ್ದು, ಮುಂದಿನ ತೀರ್ಮಾನ ಬರುವ ತನಕ ಎಲ್ಲರನ್ನು ಅಲ್ಲಿ ಇರಿಸಲಾಗುತ್ತದೆ.
ಬಿಗ್ ಬಾಸ್ ಆಯೋಜಕರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಹೆಚ್ಚಿದ್ದು, ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಶೋ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಇತ್ತೀಚೆಗೆ ವರ್ಣರಂಜಿತ ಬೆಳಕುಗಳಿಂದ ಕಂಗೊಳಿಸುತ್ತಿದ್ದ ಬಿಗ್ ಬಾಸ್ ಮನೆಯಲ್ಲಿ ಈಗ ಮೌನ, ಕತ್ತಲೆ ಮತ್ತು ಖಾಲಿತನ ಆವರಿಸಿದೆ.