ಚನ್ನಪಟ್ಟಣ: ಹಳೆ ಮೈಸೂರು ಭಾಗದಲ್ಲಿ ಕುಡಿಯುವ ಕಾವೇರಿ ನೀರಿಗೂ ಸಮಸ್ಯೆ ಉಂಟಾಗಿದ್ದು ಸರ್ಕಾರ ಈ ಬಗ್ಗೆ ಗಮನ ನೀಡುವ ನಿಟ್ಟಿನಲ್ಲಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಡಿಎಸ್‌ಎಸ್ ಸಂಚಾಲಕ ವೆಂಕಟೇಶ್(ಸೇಟು) ಒತ್ತಾಯಿಸಿದರು. ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ೧೦೦ ದಿನಗಳ ಪ್ರತಿಜ್ಞೆಯ ಹೋರಾಟ ನಡೆಸುತ್ತಿದ್ದು ಶುಕ್ರವಾರ ನಡೆದ ಇಪ್ಪತ್ಮೂರನೆ ದಿನದಹೋರಾಟದಲ್ಲಿ ಅವರು ಮಾತನಾಡಿದರು.
ಮಳೆಯ ಕೊರತೆಯ ನಡುವೆ ತಮಿಳುನಾಡು ರಾಜ್ಯದ ಮೇಲೆ ಒತ್ತಡ ಹಾಕಿ ಸಾವಿರಾರು ಕ್ಯೂಸೆಕ್ಸ್ ನೀರನ್ನು ಪಡೆಯುತ್ತಿದ್ದಾರೆ. ಇದರಿಂದ ಕಾವೇರಿ ಕೊಳ್ಳದ ರೈತರ ಬದುಕು ಬೀದಿಗೆ ಬಿದ್ದಿದೆ. ಶಿಂಷಾ ನದಿ ಪಾತ್ರದಿಂದ ಕುಡಿಯುವ ನೀರನ್ನು ಪಡೆಯುತ್ತಿದ್ದ ಬೆಂಗಳೂರು ನಗರ ಮತ್ತು ರಾಮನಗರ ಮತ್ತು ಚನ್ನಪಟ್ಟಣದ ನಗರದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದ್ದು ರಾಜ್ಯದ ಜನಪ್ರತಿನಿಧಿಗಳು ರಾಜಕೀಯ ಕೆಸರೆರೆಚಾಟ ಬಿಟ್ಟು ಜನರಿಗೆ ಕುಡಿಯುವ ನೀರು ನೀಡುವ ಬಗ್ಗೆ ಚಿಂತನೆ ಮಾಡಲಿ ಎಂದು ಆಗ್ರಹಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಈಗಾಗಲೆ ರಾಜ್ಯದ ಜಲಾಶಯಗಳು ಸಂಪೂರ್ಣ ಖಾಲಿಯಾಗುತ್ತಾ ಬಂದಿದ್ದು, ಮಳೆ ಬಂದರೂ ಆ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ತಮಿಳುನಾಡು ವಾದ ಮಾಡುತ್ತದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯನ್ನು ಶೀಘ್ರವೇ ಚಾಲನೆ ನೀಡದಿದ್ದರೆ ರಾಜ್ಯಕ್ಕೆ ಜಲ ಕ್ಷಮಾ ತಪ್ಪಿದ್ದಲ್ಲ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ರಾಜಕೀಯ ವಾಕ್ಸಮರವನ್ನು ಬದಿಗಿತ್ತು. ಮೇಕೆದಾಟು ಯೋಜನೆಯ ಬಗ್ಗೆ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಜನಪದ ಗಾಯಕ ಬೇವೂರು ರಾಮಯ್ಯ, ಮಂಗಳವಾರಪೇಟೆ ಶ್ರೀನಿವಾಸ್, ಪಾನಿಪುರಿ ಚೆನ್ನಪ್ಪ, ಗೋಬಿ ಪ್ರಭಾಕರ್, ಚಿಕ್ಕೇನಹಳ್ಳಿ ಸುಧಾಕರ್, ಸಿದ್ದಪ್ಪಾಜಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.