ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆ ಚರ್ಚೆಗಳು ತೀವ್ರಗೊಳ್ಳುತ್ತಿರುವ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹೊಸ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿಕೆ ಶಿವಕುಮಾರ್, “ವರ್ಡ್ ಪವರ್ ಈಸ್ ವರ್ಲ್ಡ್ ಪವರ್… ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನೂ ಸೇರಿದಂತೆ ಯಾರು ಆಗಿರಲಿ, ಹೇಳಿದಂತೆ ನಡೆದುಕೊಳ್ಳಬೇಕು” ಎಂದು ಹೇಳಿದ್ದಾರೆ.
ನವೆಂಬರ್ 20ರಂದು ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷದ ಆಳ್ವಿಕೆಯನ್ನು ಪೂರೈಸಿದ ಬಳಿಕ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಒಪ್ಪಂದ ಮತ್ತೆ ಚರ್ಚೆಗೆ ಬಂತು. ಡಿಸೆಂಬರ್ 1ರ ಚಳಿಗಾಲದ ಅಧಿವೇಶನಕ್ಕೂ ಮುನ್ನ ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಬುಧವಾರ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಅವರಿಗೆ “ಕಾಯಿರಿ, ನಾನು ಕರೆ ಮಾಡುತ್ತೇನೆ” ಎಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದೂ ವಿಷಯಕ್ಕೆ ಇನ್ನಷ್ಟು ತೀವ್ರತೆ ನೀಡಿದೆ. ಇದರ ಬೆನ್ನಲ್ಲೇ ಡಿಕೆಶಿ ಅವರ ಪೋಸ್ಟ್ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.



