ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ಇಂದು ನಾವೆಲ್ಲ ಮಾನವೀಯತೆ ಮರೆತು ಯುದ್ಧಗಳನ್ನು ಸಂಭ್ರಮಿಸುವ ಕಾಲಕ್ಕೆ ಬಂದು ನಿಂತಿರುವುದು ವಿಷಾದಕರ ಬೆಳವಣಿಗೆ. ಯುದ್ಧಗಳಲ್ಲಿ ತಪ್ಪು ಮಾಡದ ಚಿಕ್ಕ ಮಕ್ಕಳ, ಅನಾಮಿಕರ, ಮಹಿಳೆಯರ ರಾಶಿ ರಾಶಿ ಹೆಣಗಳನ್ನು ಕಂಡಾಗ ಮಾನವೀಯತೆ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಪರಾಮರ್ಶಿಕೊಳ್ಳಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ ಮತ್ತು ತೇಜೋಮಯ ಪ್ರದರ್ಶನ ಕಲೆಗಳ ಸಂಘದಿಂದ ಸೋಮವಾರ ಜರುಗಿದ ಮೂರು ದಿನಗಳ ಕಿತ್ತೂರು ಕರ್ನಾಟಕ ನಾಟಕೋತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಶಾಂತಿ ನೆಲೆಸಿದಾಗ ಮಾತ್ರ ಮಾನವ ಕುಲಕ್ಕೆ ಉಳಿಗಾಲವಿದೆ. ಆದರೆ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಯುದ್ಧವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಪುಭಾವಿಗಳ ಮಧ್ಯೆ ನಾವಿದ್ದೇವೆ. ಇಂದಿನ ಕೆಲ ರಾಜಕಾರಣಿಗಳು ನಮ್ಮ ಕಲಾವಿದರಿಗಿಂತ ಚೆನ್ನಾಗಿ ನಾಟಕಗಳನ್ನಾಡುತಿದ್ದಾರೆ. ಜನರು ಅದನ್ನು ನಿಜವೆಂದು ತಿಳಿದು ಸಂಭ್ರಮ ಪಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಮಾನತೆಯ ಪಾಠವನ್ನು ರಂಗಭೂಮಿ ಮಾಧ್ಯಮದಿಂದ ಕಲಿಸಿ ಕೊಡಬೇಕಾದ ಅನಿವಾರ್ಯತೆ ಇದೆ ಎಂದರು.
ರಂಗಭೂಮಿ ಸಾಧಕರಾದ ಶಿವಾನಂದ ತಾರಿಹಾಳ, ಪ್ರೇಮ ನೀರಗಟ್ಟಿ, ಭರತ ಕಲಾಚಂದ್ರ, ನಿರ್ಮಲಾ ಬಟ್ಟಲರನ್ನು ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಯ.ರು.ಪಾಟೀಲ, ಡಾ.ಗುರುದೇವಿ ಹುಲೆಪ್ಪನವರಮಠ, ಜಾಕೀರ ನದಾಫ, ಮುರಗೇಶ ಶಿವಪೂಜಿ, ತೇಜೋಮಯ ಸಂಘದ ಅಧ್ಯಕ್ಷ ಅರವಿಂದ ಪಾಟೀಲರು ಇದ್ದರು.
ಅಕಾಡೆಮಿಯ ಸದಸ್ಯ ಸಂಚಾಲಕ ಬಾಬಾಸಾಹೇಬ ಕಾಂಬಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಕುಂಬಾರ ಮತ್ತು ಬಸವರಾಜ ತಳವಾರ ನಿರೂಪಿಸಿದರು. ರಾಜು ಮಠಪತಿ ವಂದಿಸಿದರು



                                    