ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಬಡಾವಣೆಯ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿ ನಡೆದ ಮನೆಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಿರ್ಗತಿಕರಾದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವ ಬಗ್ಗೆ ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಅಮೈಕಸ್ ಕ್ಯೂರಿಗೆ ಎಪ್ರಿಲ್ 29ರವರೆಗೆ ಕಾಲಾವಕಾಶ ನೀಡಿದೆ.
ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅಮೈಕಸ್ ಕ್ಯೂರಿ ಬಿ.ವಿ. ವಿದ್ಯುಲ್ಲತಾ ಅವರು, ಸಂತ್ರಸ್ತರಿಗೆ ಪುನರ್ವಸತಿ ಒದಗಿಸಿರುವ ಮಾಹಿತಿ ಒಳಗೊಂಡ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ತಿಳಿಸಿದರು. ಆದರೆ, ಹಲವರು ಪುನರ್ವಸತಿ ಕೇಂದ್ರಕ್ಕೆ ತೆರಳಲು ನಿರಾಕರಿಸಿ ಬಡಾವಣೆಯಲ್ಲಿಯೇ ಉಳಿದಿದ್ದಾರೆ ಎಂದರು.
ನ್ಯಾಯಪೀಠ ಇದನ್ನು ಗಮನಿಸಿ ವಿಚಾರಣೆಯನ್ನು ಮುಂದೂಡಿತು.



